ಮನೆ ಬಾಗಿಲಲ್ಲೇ ಪಾಲಿಟೆಕ್ನಿಕ್ ಕೋರ್ಸ್ ಗೆ ದಾಖಲಾದ ವಿದ್ಯಾರ್ಥಿಗೆ ಪೂರ್ಣ ಉಚಿತ ಶಿಕ್ಷಣ ಉನ್ನತ ಶಿಕ್ಷಣ ಸಚಿವ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಭರವಸೆ

ಬೆಂಗಳೂರು: ಪ್ರತಿಭೆಯಿಂದಲೇ ತನ್ನ ಮನೆ ಬಾಗಿಲಲ್ಲೇ ಪಾಲಿಟೆಕ್ನಿಕ್ʼಗೆ ಪ್ರವೇಶ ಪಡೆದ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕುಡುತಿನಿ ಗ್ರಾಮದ ಪ್ರತಿಭಾವಂತ ಬಡ ವಿದ್ಯಾರ್ಥಿ ಎಂ.ಮೌನೇಶ್ʼಗೆ ಡಿಪ್ಲೊಮಾ ಶಿಕ್ಷಣವನ್ನು ಉಚಿತವಾಗಿ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಭರವಸೆ ನೀಡಿದ್ದಾರೆ. ಮೌನೇಶ್ ಮತ್ತವರ ಪೋಷಕರಿಗೆ ಕರೆ ಮಾಡಿ ಮಾತನಾಡಿದರಲ್ಲದೆ, ಹತ್ತನೇ ತರಗತಿಯಲ್ಲಿ ಶೇ.90ರಷ್ಟು ಅಂಕ ಪಡೆದು ತೇರ್ಗಡೆಯಾದ ವಿದ್ಯಾರ್ಥಿಯನ್ನು ಶ್ಲಾಘಿಸಿದರಲ್ಲದೆ, ಮುಂದಿನ ಮೂರು ವರ್ಷಗಳ ವಿದ್ಯಾಭ್ಯಾಸವನ್ನು ಸರಕಾರ ಸಂಪೂರ್ಣ ಉಚಿತವಾಗಿ ನೀಡಲಿದೆ ಎಂದು ಭರವಸೆ ನೀಡಿದರು.
ಇದೇ ವೇಳೆ ಮೌನೇಶ್ ಪೋಷಕರ ಜತೆಯೂ ಮಾತನಾಡಿದ ಸಚಿವರು, ನಿಮ್ಮ ಪುತ್ರನಿಗೆ ಉಚಿತ ಶಿಕ್ಷಣ ನೀಡಲಾಗುವುದು. ಯಾವುದೇ ಚಿಂತೆ ನಿಮಗೆ ಬೇಡ. ಎಲ್ಲವನ್ನೂ ಸರಕಾರವೇ ನೋಡಿಕೊಳ್ಳಲಿದೆ. ತದ ನಂತರ ಉದ್ಯೋಗ ಅಥವಾ ಉನ್ನತ ಶಿಕ್ಷಣಕ್ಕೆ ತೆರಳಬೇಕಾದರೂ ಸರಕಾರ ಸಹಕಾರ ನೀಡುತ್ತದೆ ಎಂದು ಸಚಿವರು ಹೇಳಿದರು. ವಿದ್ಯಾರ್ಥಿ ಮೌನೇಶ್ ಹಾಗೂ ಅವರ ಪೋಷಕರು ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು.
ಪ್ರಾಂಶುಪಾಲರ ಕಾರ್ಯಕ್ಕೆ ಮೆಚ್ಚುಗೆ:
ವಿದ್ಯಾರ್ಥಿಯ ಮನೆ ಬಾಗಿಲಿಗೇ ತೆರಳಿ ಪ್ರವೇಶಾತಿ ನೀಡಿದ ಕೂಡ್ಲಿಗಿಯ ಸರಕಾರಿ ಪಾಲಿಟೆಕ್ನಿಕ್ʼನ ಪ್ರಾಂಶುಪಾಲರು, ಬೋಧಕ ಸಿಬ್ಬಂದಿಯನ್ನು ಇದೇ ವೇಳೆ ಸಚಿವ ಅಶ್ವತ್ಥನಾರಾಯಣ ಅವರು ಮನಸಾರೆ ಶ್ಲಾಘಿಸಿದರು. ಪ್ರಾಂಶುಪಾಲ ಎಸ್.ಮಲ್ಲಪ್ಪ ಅವರಿಗೆ ಕರೆ ಮಾಡಿ ಮಾತನಾಡಿದ ಸಚಿವರು, “ನೀವು ಬಹಳ ಒಳ್ಳೆಯ ಕೆಲಸ ಮಾಡಿದ್ದೀರಿ. ಆ ವಿದ್ಯಾರ್ಥಿಗೆ ತಗುಲುವ ಎಲ್ಲ ವೆಚ್ಚವನ್ನೂ ಸರಕಾರವೇ ಭರಿಸಲಿದೆ. ನಿಮ್ಮದೇ ವೆಚ್ಚದಲ್ಲಿ ಬಡ ವಿದ್ಯಾರ್ಥಿಯೊಬ್ಬರನ್ನು ದತ್ತು ಪಡೆದು, ಅವರ ಮನೆ ಬಾಗಿಲಿಗೇ ಹೋಗಿ ದಾಖಲು ಮಾಡಿಕೊಂಡಿರುವ ಕ್ರಮ ಮಾದರಿಯಾದದ್ದುʼ ಎಂದು ಹೇಳಿದರು.

Leave a Reply

Your email address will not be published. Required fields are marked *