ಭಜರಂಗದಳದ ಕಾರ್ಯಕರ್ತ ಹರ್ಷ ಮನೆಗೆ ಮಾಜಿ ಸಿಎಂ ಯಡಿಯೂರಪ್ಪ ಭೇಟಿ

ಶಿವಮೊಗ್ಗ: ಮಾರ್ಚ್ 06 ಉದಯಕಾಲ ಶಿವಮೊಗ್ಗದಲ್ಲಿ ಹತ್ಯೆಯಾದ ಭಜರಂಗದಳದ ಕಾರ್ಯಕರ್ತ ಹರ್ಷ ಅವರ ಮನೆಗೆ ಮಾಜಿ ಸಿಎಂ ಯಡಿಯೂರಪ್ಪ ಭೇಟಿ ನೀಡಿದರು. ಸೀಗೆಹಟ್ಟಿಯಲ್ಲಿರುವ ಹರ್ಷ ನಿವಾಸಕ್ಕೆ ಆಗಮಿಸಿದ ಬಿಎಸ್ ವೈ, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ರಾಜ್ಯ ಸರ್ಕಾರದ ಪರವಾಗಿ ಹರ್ಷ ಕುಟುಂಬಕ್ಕೆ ಪರಿಹಾರ ಚೆಕ್ ನೀಡಿದರು.

ಹತ್ಯೆಯಾದ ಹರ್ಷನ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದರು. ರಾಜ್ಯ ಸರ್ಕಾರದ ಪರವಾಗಿ ಇಂದು ಯಡಿಯೂರಪ್ಪ ಹರ್ಷ ಕುಟುಂಬಕ್ಕೆ 25 ಲಕ್ಷ ರೂಗಳ ಚೆಕ್ ನೀಡಿದರು. ಈ ವೇಳೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಸಹ ಉಪಸ್ಥಿತರಿದ್ದರು.

ಹರ್ಷ ಕುಟುಂಬಸ್ಥರನ್ನು ಭೇಟಿಯಾದ ಬಳಿಕ ಮಾತನಾಡಿದ ಯಡಿಯೂರಪ್ಪ, 26 ವರ್ಷದ ಹರ್ಷ ಎಲ್ಲರ ಜೊತೆ ಆತ್ಮೀಯ ಸಂಬಂಧ ಹೊಂದಿದ್ದ. ಈ ಭಾಗದಲ್ಲಿ ಗೊಂದಲ, ಹೋರಾಟಕ್ಕೆ ಅವಕಾಶ ಕೊಡ್ತಾ ಇರಲಿಲ್ಲ. ಹಿಂದು ಯುವಮುಖಂಡನಾಗಿ ಹರ್ಷ ಬೆಳೆಯುತ್ತಿದ್ದ. ಇದನ್ನೂ ಸಹಿಸಕ್ಕಾಗದೇ ಕೆಲವು ಕಿಡಿಗೇಡಿಗಳು ಕೊಲೆ ಮಾಡಿದ್ದಾರೆ. ಇದು ಅತ್ಯಂತ ಅಮಾನುಷ ಕೃತ್ಯ. ಹರ್ಷನ ಕುಟುಂಬಕ್ಕೆ ದೇವರು ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಸರ್ಕಾರದ ಕಡೆಯಿಂದ 25 ಲಕ್ಷ ರೂ. ಚೆಕ್ ಅನ್ನು ಅವರಿಗೆ ಕೊಟ್ಟಿದ್ದೇನೆ. ಹಣ ಮುಖ್ಯ ಅಲ್ಲ, ಹರ್ಷನನ್ನು ಕುಟುಂಬದ ನೋವು ದೊಡ್ಡದು. ದುಃಖ ಭರಿಸುವ ಶಕ್ತಿ ದೇವರು ಕೊಡಲಿ ಎಂಬುವ ಪ್ರಾರ್ಥನೆ ಬಿಟ್ಟರೇ ನಮ್ಮ ಕೈಯಲ್ಲಿ ಏನು ಇಲ್ಲ ಎಂದ ಬಿಎಸ್ವೈ ಹೇಳಿದರು.

ನಮ್ಮ ಹಾಗೂ ಪ್ರಧಾನಿ ಮೋದಿಯವರ ಅಪೇಕ್ಷೆ ಎಲ್ಲರೂ ಒಟ್ಟಾಗಿ ಬಾಳಬೇಕು. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬಾಳ್ಬೇಕು. ಸಣ್ಣಪುಟ್ಟ ಕಾರಣಕ್ಕೆ ಕೊಲೆ, ಗೊಂದಲ ಉಂಟು ಮಾಡಬಾರದು. ಅದರಿಂದ ಶಾಂತಿ-ಸುವ್ಯವಸ್ಥೆ ಭಂಗವಾಗುತ್ತೆ. ಅದಕ್ಕೆ ಯಾರು ಅವಕಾಶ ಕೊಡಬಾರದು. ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಬದುಕಬೇಕು ಎಂಬುದು ಪ್ರಧಾನಿಯವರ ಅಪೇಕ್ಷೆ. ಈ ರೀತಿಯ ಘಟನೆಗಳು ಮತ್ತೇ ನಡೆಯದಂತೆ ಎಚ್ಚರ ವಹಿಸಬೇಕು. ಸುತ್ತಮುತ್ತಲಿನ ಜನರು ದುರ್ಘಟನೆ ನಡೆಯದಂತೆ ಎಚ್ಚರ ವಹಿಸಬೇಕು ಎಂದ ಯಡಿಯೂರಪ್ಪ ಹೇಳಿದರು.

Leave a Reply

Your email address will not be published. Required fields are marked *