ಬೆಂಗಳೂರು: ಜನೆವರಿ 23 (ಉದಯಕಾಲ) ಉತ್ತಮ ಸಂಬಳ, ಭದ್ರತೆಯುಳ್ಳ ನೌಕರಿ, ವಿಶೇಷ ಸವಲತ್ತುಗಳು.. ಹೀಗೆ ನಾನಾ ಉದ್ದೇಶಗಳಿಂದ ಉದ್ಯೋಗಿಗಳು ತಮ್ಮ ಕೆಲಸವನ್ನು ಬದಲಾಯಿಸುತ್ತಾ ಇರುತ್ತಾರೆ. ಇಂತಹ ಸಂದರ್ಭದಲ್ಲಿ ಭವಿಷ್ಯ ನಿಧಿಯಲ್ಲಿ ನಾವು ಕೂಡಿಟ್ಟ ಹಣ ಹೇಗೆ ತೆಗೆದುಕೊಳ್ಳುವುದು.. ಹಾಗೆಯೇ ನಾವು ತೊರೆದ ಕಂಪನಿಯಿಂದ ಏನಾದ್ರೂ ಸಮಸ್ಯೆಗಳ ಉದ್ಭವಿಸುತ್ತವೆಯೋ ಅನ್ನೋದು ಉದ್ಯೋಗಿಗೆ ಹಲವು ಅನುಮಾನಗಳ ಕಾಡುತ್ತಿರುತ್ತವೆ. ಈ ಎಲ್ಲ ಸಮಸ್ಯೆಗಳನ್ನು ಯು.ಎನ್.ಐ. ಕನ್ನಡ ನಿಮ್ಮಿಂದ ದೂರು ಮಾಡಲು ಯತ್ನಿಸಲಿದೆ.
ಈಗ ಕೆಲಸ ಬದಲಿಸಿದ ನಂತರ ಹಳೆ ಕಂಪನಿಯ ನಿರ್ಗಮನದ ದಿನಾಂಕ (exit date) ಅನ್ನು ತುಂಬುವ ಅಥವಾ ಹಳೆಯ ಪಿಎಫ್ ಖಾತೆಯಲ್ಲಿ ಠೇವಣಿ ಇಟ್ಟಿರುವ ಮೊತ್ತವನ್ನು ಹೊಸ ಪಿಎಫ್ ಖಾತೆಗೆ ವರ್ಗಾಯಿಸುವ ಕೆಲಸ ಮನೆಯಲ್ಲಿ ಕುಳಿತು ಕೆಲವೇ ನಿಮಿಷಗಳಲ್ಲಿ ಮಾಡುವ ಅನುಕೂಲವನ್ನು ಇಪಿಎಫ್ ಮಾಡಿಕೊಟ್ಟಿದೆ. ನೀವು ಇತ್ತೀಚೆಗೆ ನಿಮ್ಮ ಕೆಲಸವನ್ನು ಬದಲಾಯಿಸಿದ್ದರೆ, ನಿಮ್ಮ ಇಪಿಎಫ್ ಖಾತೆಯ ಬಗ್ಗೆ ನೀವು ಚಿಂತಿತರಾಗಬಹುದು. ಆದಾಗ್ಯೂ, ಈ ವಿಷಯದ ಬಗ್ಗೆ ಈಗ ಚಿಂತಿಸಬೇಕಾಗಿಲ್ಲ. PF ಖಾತೆಗಳನ್ನು ನಿರ್ವಹಿಸುವ ಸಂಸ್ಥೆ (EPFO) ಕಳೆದ ಕೆಲವು ವರ್ಷಗಳಲ್ಲಿ ಆನ್ಲೈನ್ ಪ್ರಕ್ರಿಯೆಗೆ ದೊಡ್ಡ ಉತ್ತೇಜನವನ್ನು ನೀಡುತ್ತಿದೆ.
ಮನೆಯಲ್ಲಿ ಕುಳಿತು PF ಖಾತೆಯಲ್ಲಿ ನಿರ್ಗಮನ ದಿನಾಂಕವ (exit date)ನ್ನು ಹೇಗೆ ಭರ್ತಿ ಮಾಡಬಹುದು ಅನ್ನೋದರ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ.
1. ನಿರ್ಗಮನದ ದಿನಾಂಕ (ಕಂಪನಿ ತೊರೆದ ದಿನ) ತುಂಬಲು, ನೀವು ಈ ಕೆಳಗಿನ ವೆಬ್ ಪೋರ್ಟಲ್ಗೆ ಲಾಗ್ ಇನ್ ಮಾಡಬೇಕು. ಇದಕ್ಕಾಗಿ ನೀವು ಮೊಬೈಲ್ ನಲ್ಲಿನ ಕ್ರೋಮ್ ಆ್ಯಪ್ ಅನ್ನು ಬಳಸಬಹುದು. (https://unifiedportal-mem.epfindia.gov.in/memberinterface/).
2. ಈಗ ನಿಮ್ಮ UAN (ಯೂನಿವರ್ಸಲ್ ಖಾತೆ ಸಂಖ್ಯೆ) ಮತ್ತು ಪಾಸ್ವರ್ಡ್ನೊಂದಿಗೆ ಈ ಪೋರ್ಟಲ್ಗೆ ಲಾಗಿನ್ ಮಾಡಿ.
3. ಈಗ ‘ಮ್ಯಾನೇಜ್’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಇಲ್ಲಿ ಡ್ರಾಪ್ ಡೌನ್ ಪಟ್ಟಿಯ ಕೆಳಭಾಗದಲ್ಲಿ ‘ಮಾರ್ಕ್ ಎಕ್ಸಿಟ್’ ಆಯ್ಕೆ ಕಾಣಿಸುತ್ತದೆ.
4. ಇದರ ನಂತರ ‘ಮಾರ್ಕ್ ಎಕ್ಸಿಟ್’ ಮೇಲೆ ಕ್ಲಿಕ್ ಮಾಡಿ.
5. ಈಗ ‘ಸೆಲೆಕ್ಟ್ ಎಂಪ್ಲಾಯ್ಮೆಂಟ್’ ಮುಂದೆ ಇರುವ ಡ್ರಾಪ್ ಡೌನ್ ಪಟ್ಟಿಯಿಂದ PF ಸಂಖ್ಯೆಯನ್ನು ಆಯ್ಕೆ ಮಾಡಿ, ಅದರಲ್ಲಿ ನೀವು ಬಯಸಿದ ‘ನಿರ್ಗಮನ ದಿನಾಂಕ’ ಅನ್ನು ಭರ್ತಿ ಮಾಡಿ.
6. ಈಗ ಕಂಪನಿಯನ್ನು ತೊರೆಯುವ ದಿನಾಂಕ ಭರ್ತಿ ಮಾಡಿದ ನಂತರ ಕಾರಣವನ್ನು ಆಯ್ಕೆ ಮಾಡಿ ಮತ್ತು ಒಪ್ಪಿಗೆ ಪಡೆಯಲು ಚೆಕ್ಬಾಕ್ಸ್ ಅನ್ನು ಕ್ಲಿಕ್ ಮಾಡಿ. ಬಳಿಕ ‘ಒಟಿಪಿ ವಿನಂತಿ’ ಕ್ಲಿಕ್ ಮಾಡಿ.
7. ‘ಓಟಿಪಿ ವಿನಂತಿ’ ಕ್ಲಿಕ್ ಮಾಡಿದ ನಂತರ ‘ಆಧಾರ್’ ನಂಬರ್ ಅನ್ನು ಲಿಂಕ್ ಮಾಡಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಸಂದೇಶ ಬರಲಿದೆ.
8. ಮೊಬೈಲ್ನಲ್ಲಿ ಬಂದ OTP ಅನ್ನು ನಮೂದಿಸಿದ ನಂತರ ಚೆಕ್ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
9. ಈಗ ಕೆಳಭಾಗದಲ್ಲಿ ಸಲ್ಲಿಸು (submit button) ಕ್ಲಿಕ್ ಮಾಡಿ.
10. ಈ ಎಲ್ಲ ಪ್ರಕ್ರಿಯೆಗಳ ಬಳಿಕ ನಿಮ್ಮ ಫಾರ್ಮ್ ಇಪಿಎಫ್ಒಗೆ ಸಲ್ಲಿಕೆಯಾಗುತ್ತದೆ.
ಈ ವಿಷಯಗಳಿಗೆ ಹೆಚ್ಚಿನ ಗಮನಕೊಡಿ
ನಿರ್ಗಮನ ದಿನಾಂಕ ಅಂದರೆ ನೀವು ಕಂಪನಿಯಿಂದ ಕೆಲಸ ಬಿಟ್ಟ ದಿನಾಂಕವನ್ನು ನೀವೇ ಭರ್ತಿ ಮಾಡುವ ಸೌಲಭ್ಯವು ತುಂಬಾ ಒಳ್ಳೆಯದಾಗಿದೆ. ಆದರೆ ಹಿಂದಿನ ಕಂಪನಿಯು ತನ್ನ ಪಾಲಿನ ಕಾಂಟ್ರಿಬ್ಯುಷನ್ ಇಪಿಎಫ್ಒಗೆ ಸಲ್ಲಿಕೆ ಮಾಡಿದ 2 ತಿಂಗಳ ನಂತರ ಈ ಕೆಲಸ ಮಾಡಲು ಸಾಧ್ಯ. ಇದರ ನಂತರ ನೀವು ಪಿಎಫ್ ಹಿಂಪಡೆಯಬಹುದು ಅಥವಾ ಹೊಸ ಪಿಎಫ್ ಖಾತೆಗೆ ಹಣ ವರ್ಗಾಯಿಸಬಹುದು. ಇದಕ್ಕೂ ಮುನ್ನ ಮೊಬೈಲ್ ಸಂಖ್ಯೆಯನ್ನು ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಿರುವುದು ಕಡ್ಡಾಯವಾಗಿರುತ್ತದೆ. ಆಗ ಮಾತ್ರ ನೀವು ನಿಮ್ಮ ಮೊಬೈಲ್ ನಲ್ಲಿ OTP ಪಡೆಯಲು ಸಾಧ್ಯವಾಗುತ್ತದೆ.