ರಾಜಕೀಯ ಅಂತ್ಯವೋ ಅಥವಾ ರಾಜಕೀಯ ಪುನರ್ಜೀವನವೋ ಗೊತ್ತಿಲ್ಲ: ಅಡ್ಡಗೋಡೆಯ ಮೇಲೆ ದೀಪವಿಟ್ಟ ಆನಂದ್ ಸಿಂಗ್

ಹೊಸಪೇಟೆ,ಆ.11 ರಾಜಕೀಯ ಅಂತ್ಯವೋ ಅಥವಾ ರಾಜಕೀಯ ಪುನರ್ಜೀವನವೋ ಗೊತ್ತಿಲ್ಲ ಎನ್ನುವ ಮೂಲಕ ಸಚಿವ ಆನಂದ್ ಸಿಂಗ್ ಮತ್ತೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಪ್ರವಾಸೋದ್ಯಮ ಇಲಾಖೆ ಖಾತೆ ನೀಡಿದ್ದಕ್ಕೆ ಬೇಸರಗೊಂಡಿರುವ ಆನಂದ್ ಸಿಂಗ್ ಹೊಸಪೇಟೆಯ ಆರಾಧ್ಯ ದೈವ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಇಂತಹದ್ದೊಂದು ಎಚ್ಚರಿಕೆಯೋ ಮಾರ್ಮಿಕವೋ ಅಥವಾ ಗೊಂದಲವೋ ಎನ್ನುವಂತಹ ಹೇಳಿಕೆಯನ್ನು ಮಾಧ್ಯಮದವರ ಮುಂದೆ ಹೇಳಿದ್ದಾರೆ.
ಖಾತೆ ಬದಲಾವಣೆ ಮಾಡಲೇಬೇಕೆಂದು ಪಟ್ಟುಹಿಡಿದು ಕುಳಿತಿರುವ ಆನಂದ್ ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎನ್ನುವ ಸುದ್ದಿಯೊಂದು ಖಾತೆ ಹಂಚಿಕೆಯಾದಾಗಿನಿಂದಲೂ ಹರಡುತ್ತಲೇಯಿದೆಯಾದರೂ ಇದರ ಬಗ್ಗೆ ಸ್ಪಷ್ಟತೆ ಸಿಕ್ಕಿರಲಿಲ್ಲ. ಇನ್ನೂ ತಮ್ಮ ರಾಜೀನಾಮೆ ನೀಡುವ ಬಗ್ಗೆ ಆನಂದ್ ಸಿಂಗ್ ಬಹಿರಂಗವಾಗಿ ಎಲ್ಲಿಯೂ ಹೇಳಿಯೂ ಇಲ್ಲ.
ಬೊಮ್ಮಾಯಿ ಸಂಪುಟದಲ್ಲಿ ಅಸಮಾಧಾನ ಹೊಗೆ ಕಾಣಿಸಿಕೊಳ್ಳುತ್ತಿರುವ ಹೊತ್ತಿಗೆ ಮಂಗಳವಾರ ಆನಂದ್ ಸಿಂಗ್ ಹೊಸಪೇಟೆಯ ತಮ್ಮ ದೈವಕ್ಕೆ ಪೂಜೆ ಸಲ್ಲಿಸಿ ಮಾಧ್ಯಮದ ಮುಂದೆ ಬಂದರು.
“ನಾನು ಕಲೆಗಾರನಲ್ಲ,ಬಣ್ಣಹಚ್ಚಿ ಮಾತನಾಡಲೂ ಹೊಗಳಲೂ ಬರುವುದಿಲ್ಲ.ಯಡಿಯೂರಪ್ಪ ಕೇಳಿದ್ದೆಲ್ಲ ಕೊಟ್ಟಿದ್ದಾರೆ,ಸಚಿವ ಸ್ಥಾನ ನೀಡಿ,ವಿಜಯನಗರ ಜಿಲ್ಲೆಯನ್ನೂ ನೀಡಿದ್ದಾರೆ.ನಾನು ಎಂತಹ ವ್ಯಕ್ತಿ ಎಂಬುದನ್ನು ಹೇಳಲು ನನಗೆ ಬರುವುದಿಲ್ಲ,ಜಿಲ್ಲೆಯ ಜನರೇ ನನ್ನ ಬಗ್ಗೆ ಹೇಳುತ್ತಾರೆ”ಎಂದರು.
ಖಾತೆ ಬದಲಾಯಿಸುವಂತೆ ಯಡಿಯೂರಪ್ಪರನ್ನು ಕಳೆದ 8 ನೇ ತಾರೀಖಿನಂದೂ ಭೇಟಿ ಮಾಡಿ ಮನವಿ ಮಾಡಿದ್ದೇನೆ.ಅಂತೆಯೇ ಸಿಎಂ ಬೊಮ್ಮಾಯಿಗೂ ಹೇಳಿದ್ದೇನೆ.ಪಕ್ಷದ ನಾಯಕರು ಮಾಧ್ಯಮದ ಮುಂದೆ ರಾಜಕೀಯ ಹೇಳಿಕೆ ನೀಡಬೇಡಿ ಎಂದಿದ್ದಾರೆ.ಪಕ್ಷದ ಮೇಲೆ ನಾಯಕರ ಮೇಲೆ ನನಗೆ ವಿಶ್ವಾಸವಿದೆ.ನಾನು ಯಾರ ಮೇಲೂ ಒತ್ತಡ ಹೇರಿಲ್ಲ,ಮನವಿ ಮಾಡಿದ್ದೇನಷ್ಟೆ ಎಂದರು.
2008ರ ಘಟನೆಯೊಂದನ್ನು ಸ್ಮರಿಸಿದ ಆನಂದ್ ಸಿಂಗ್,” ನನ್ನ ರಾಜಕೀಯ ಆರಂಭವಾಗಿದ್ದು ಇದೇ ಕೃಷ್ಣನ ಸನ್ನಿಧಾನದಲ್ಲಿ.2008ರಲ್ಲಿ ಅನಾಮಿಕ ವ್ಯಕ್ತಿಯೊಬ್ಬ ಕೃಷ್ಣನ ರೂಪದಲ್ಲಿ ಬಂದು ಸಚಿವನಾಗುತ್ತೀಯಾ, ಎಂದಾಗ ಯಾರೋ ಎಂದು ನಕ್ಕಿದ್ದೆ.ಆದರೆ ಅವರಂದದ್ದು ನಿಜವಾಯಿತು.ಹೀಗಾಗಿ ಗೋಪಾಲಕೃಷ್ಣನ ಸನ್ನಿಧಿಯಲ್ಲಿಯೇ ನನ್ನ ರಾಜಕೀಯ ಆರಂಭವಾಯಿತು,ಇಲ್ಲಿಂದಲೇ ಅಂತ್ಯವಾಗುತ್ತಿದೆಯೋ ಅಥವಾ ಪುನರ್ ಆರಂಭವಾಗುತ್ತಿದೆಯೋ ಗೊತ್ತಿಲ್ಲ.ಪೂಜೆ ಸಲ್ಲಿಸಿದ್ದೇನೆ.ದೈವ ಸಂಕಲ್ಪದಂತೆ ಮುಂದಿನ ಹೆಜ್ಜೆ ಇಡುತ್ತೇನೆ.ಇಂದು ಅಥವಾ ನಾಳೆ ಸಿಎಂ ಭೇಟಿಯಾಗುತ್ತೇನೆ‌.ಇನ್ಯಾವುದೇ ರಾಜಕೀಯ ವಿಚಾರಗಳಿಗೆ ಪ್ರತಿಕ್ರಿಯಿಸುವುದಿಲ್ಲ”ಎಂದು ಭಾವನಾತ್ಮಕವಾಗಿ ಒಂದಿಷ್ಟು ಸಿನಿಮೀಯಾ ರೀತಿಯ ಹೇಳಿಕೆಗಳನ್ನು ನೀಡಿ ಆನಂದ್ ಸಿಂಗ್ ತೆರಳಿದರು.

, ,

Leave a Reply

Your email address will not be published. Required fields are marked *