ಬೆಂಗಳೂರು, ಜ 8(ಉದಯಕಾಲ) – ಮೇಕೆ ದಾಟು ಪಾದಯಾತ್ರೆಗೂ ಮುನ್ನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸ್ವಕ್ಷೇತ್ರ ಕನಕಪುರದ ಮನೆ ದೇವರಿಗೆ ವಿಶೇಷ ಪೂಜೆ ನೆರವೇರಿಸಿದರು. ರಾಮನಗರ ಜಿಲ್ಲೆಯ ಕನಕಪುರದ ಕೆಂಕೇರಮ್ಮ ದೇವಸ್ಥಾನಕ್ಕೆ ಡಿ.ಕೆ.ಶಿವಕುಮಾರ್, ಪತ್ನಿ ಜೊತೆ ಆಗಮಿಸಿ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿದರು.
ಯಾವುದೇ ಮಹತ್ವದ ಕೆಲಸ ಆರಂಭಿಸುವ ಮುನ್ನ ಮನೆ ದೇವರಿಗೆ ಮೊದಲು ಪೂಜೆ ನೆರವೇರಿಸುವ ಸಂಪ್ರದಾಯವನ್ನು ಡಿ.ಕೆ ಶಿವಕುಮಾರ್ ಮೊದಲಿನಿಂದಲೂ ನಡೆಸಿಕೊಂಡು ಬರುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾಳೆ ಮೇಕೆದಾಟಿನಿಂದ ಪಾದಯಾತ್ರೆ ನಡೆಸಲಿದ್ದೇವೆ. ಯಾವುದೇ ಅಡೆತಡೆ ನಡೆಸಿದರೂ ಪಾದಯಾತ್ರೆ ನಡೆದೇ ನಡೆಯುತ್ತದೆ. ನಾನು ಹಾಗೂ ಸಿದ್ದರಾಮಯ್ಯ ಈಗಾಗಲೇ ಪಾದಯಾತ್ರೆ ಮಾಡುವುದಾಗಿ ಘೋಷಣೆ ಮಾಡಿದ್ದೇವೆ ಎಂದು ಹೇಳಿದರು.
ನಾನು ಹಾಗೂ ಹಿರಿಯ ನಾಯಕ ಸಿದ್ದರಾಮಯ್ಯನವರ ಜೊತೆ ಹಲವು ಕಾಂಗ್ರೆಸ್ ಶಾಸಕರು, ಮುಂಖಡರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಾದಯಾತ್ರೆಗೆ ಕಡಿವಾಣ ಹಾಕುವ ಪ್ರಯತ್ನ ಸರ್ಕಾರ ನಡೆಸುತ್ತಲೇ ಇದೆ. ಹಾಗಾಗಿ ಪಾದಯಾತ್ರೆ ಮಾಡೇ ತೀರಲು ನಿರ್ಧರಿಸಿದ್ದೇವೆ ಎಂದರು