ಮೊದಲು ಶಿಷ್ಟಾಚಾರ ಉಲ್ಲಂಘಿಸಿದ ಸಚಿವರ ವಿರುದ್ಧ ಕೇಸ್ ಹಾಕಿ: ಡಿ.ಕೆ ಶಿವಕುಮಾರ್

ಬೆಂಗಳೂರು:ಕೋವಿಡ್ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಶಿಷ್ಟಾಚಾರ ಹಾಗೂ ಮಾರ್ಗಸೂಚಿ ಉಲ್ಲಂಘನೆ ಮಾಡಿರುವ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ, ಸಚಿವರಾದ ಶ್ರೀರಾಮುಲು, ಈಶ್ವರಪ್ಪ ಅವರ ವಿರುದ್ಧ ಮೊದಲು ಕೇಸ್ ಹಾಕಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸವಾಲು ಹಾಕಿದ್ದಾರೆ.

ಅವೈಜ್ಞಾನಿಕವಾಗಿ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ವಿರುದ್ಧ ಕಾಂಗ್ರೆಸ್ ನಾಯಕರ ನಿಯೋಗ ಇಂದು ರಾಜ್ಯಪಾಲರನ್ನು ಭೇಟಿ ಮಾಡಿ ತಮ್ಮ ಮನವಿಯನ್ನು ರಾಷ್ಟ್ರಪತಿಗಳಿಗೆ ತಲುಪಿಸುವಂತೆ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರು ಇದ್ದರು.

ರಾಜ್ಯಪಾಲರ ಭೇಟಿ ನಂತರ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಇಂದು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವುದಾಗಿ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಡಿ.ಕೆ ಶಿವಕುಮಾರ್

‘ಬೆಳಗಾವಿಯಲ್ಲಿ ನಡೆದ ಮದುವೆಗೆ ಮುಖ್ಯಮಂತ್ರಿಗಳು ಹೋದಾಗ, ಸಚಿವ ಶ್ರೀರಾಮುಲು ಅವರ ಕಾರ್ಯಕ್ರಮ, ಶಿವಮೊಗ್ಗದಲ್ಲಿ ಈಶ್ವರಪ್ಪ ಅವರ ಕಾರ್ಯಕ್ರಮದಲ್ಲಿ ಎಷ್ಟು ಜನ ಸೇರಿದ್ದರು? ಸಾಮಾಜಿಕ ಅಂತರ ಹೇಗೆ ಕಾಯ್ದುಕೊಳ್ಳಲಾಗಿತ್ತು, ಅವರು ಕೇಂದ್ರ ಹಾಗೂ ತಮ್ಮ ಸರ್ಕಾರದ ನಿಯಮಾವಳಿಗಳನ್ನು ಯಾವ ರೀತಿ ಉಲ್ಲಂಘನೆ ಮಾಡಿದ್ದಾರೆ ಎಂಬುದು ನಮಗೆ ಗೊತ್ತಿದೆ.

ಮತ್ತೊಬ್ಬ ಸಚಿವರು ಈಜುಕೊಳದಲ್ಲಿ ಈಜಾಡಿದ್ದು, ಸರ್ಕಾರದ ಮಾರ್ಗಸೂಚಿಯಲ್ಲಿ ಈಜಾಡಲು ಅವಕಾಶ ಇದೆಯೇ? ಮದುವೆ, ಮುಂಜಿ, ಖಾಸಗಿ ಕಾರ್ಯಕ್ರಮಗಳ ವೇಳೆ ಕಾನೂನು ಉಲ್ಲಂಘನೆ ಮಾಡಿರುವ ಸಚಿವರುಗಳ ವಿರುದ್ಧ ಮೊದಲು ಪ್ರಕರಣ ದಾಖಲಿಸಿ. ಆನಂತರ ಜನರ ಪರ ಧ್ವನಿ ಎತ್ತಿದ ನಮ್ಮ ವಿರುದ್ಧ ಕೇಸ್ ಹಾಕಲಿ. ನಾವು ಯಾವುದೇ ಕೇಸ್ ಗಳಿಗೆ ಹೆದರುವುದಿಲ್ಲ. ನಾವು ನಮ್ಮ ಹೋರಾಟ ಮುಂದುವರಿಸುತ್ತೇವೆ.

*ಜನರನ್ನು ರಕ್ಷಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲ:*

ಕೇಂದ್ರ ಸರ್ಕಾರ ಅವೈಜ್ಞಾನಿಕವಾಗಿ ತೈಲ ಬೆಲೆ ಏರಿಕೆ ಮಾಡುತ್ತಿರುವುದರ ವಿರುದ್ಧ ಹಾಗೂ ಜನ ಸಾಮಾನ್ಯರ ಪರವಾಗಿ ಇಂದು ರಾಷ್ಟ್ರಾದ್ಯಂತ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹೋರಾಟ ಮಾಡಿದೆ.

ಜನ ಸಾಮಾನ್ಯರನ್ನು ರಕ್ಷಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೇಂದ್ರದ ಬೆಲೆ ಏರಿಕೆಯಿಂದ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಲಿದ್ದು, ಜನರು ಅನುಭವಿಸುತ್ತಿರುವ ಸಂಕಷ್ಟಗಳ ಕುರಿತ ಮಾಹಿತಿಯನ್ನು ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ತಲುಪಿಸುತ್ತಿದ್ದೇವೆ.

ಪತ್ರದಲ್ಲಿ ಯುಪಿಎ ಸರ್ಕಾರ ಸಬ್ಸಿಡಿ ನೀಡಿ ಹೇಗೆ ಕಡಿಮೆ ಬೆಲೆಗೆ ಜನ ಸಾಮಾನ್ಯರಿಗೆ ಇಂಧನ ಸಿಗುವಂತೆ ಮಾಡಿತ್ತು. ಈಗಿನ ಸರ್ಕಾರ ಹೇಗೆ ಸಬ್ಸಿಡಿ ನೀಡದೇ ದರ ಹೆಚ್ಚಳ ಮಾಡಿದೆ ಎಂಬುದನ್ನು ವಿವರಿಸಿದ್ದೇವೆ.

ಸರ್ಕಾರದ ನಿರ್ಧಾರ ಜನರ ಮೇಲೆ ಪರಿಣಾಮ ಬೀರುತ್ತಿದ್ದು, ಅವರನ್ನು ರಕ್ಷಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಯುಪಿಎ ಸರ್ಕಾರ ಇದ್ದಾಗ ಕೇಂದ್ರದಲ್ಲಿ ಪೆಟ್ರೋಲಿಯಂ ಬೆಲೆ ಏರಿಕೆ ಯಾವ ರೀತಿ ಮಾಡಬೇಕು ಎಂದು ಒಂದು ನೀತಿ ರಚಿಸಲಾಗಿತ್ತು. ಅವುಗಳನ್ನು ಗಾಳಿಗೆ ತೂರಿ ಅವರ ಖಜಾನೆ ಭರ್ತಿ ಮಾಡಲು ಪ್ರಯತ್ನಿಸುತ್ತಿದೆ. ಆಮೂಲಕ ಜನ ವಿರೋಧಿ ನೀತಿ ಅನುಸರಿಸಿದೆ.

Leave a Reply

Your email address will not be published. Required fields are marked *