ಜನರ ನಾಡಿ ಮಿಡಿತ ಅರಿಯುವಲ್ಲಿ ಪಕ್ಷ ವಿಫಲ – ದಿನೇಶ್ ಗುಂಡೂರಾವ್

ಬೆಂಗಳೂರು: ಮಾರ್ಚ್ 11 (ಉದಯಕಾಲ) ಮತದಾರರ ನಾಡಿ ಮಿಡಿತ ಅರಿಯವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದು ಗೋವಾದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಪಂಚರಾಜ್ಯ ಚುನಾವಣಾ ಫಲಿತಾಂಶ ಕಾಂಗ್ರೆಸ್ ಪಕ್ಷದ ಮಟ್ಟಿಗೆ ಹಿನ್ನಡೆಯಾದರೂ ಅಂತಿಮವಾಗಿ ಜನಾದೇಶಕ್ಕೆ ಗೌರವ ಕೊಡಲೇಬೇಕು.‌ ಚುನಾವಣೆ ನಡೆದ ಐದೂ ರಾಜ್ಯಗಳಲ್ಲಿ ಪಕ್ಷದ ಪರ ಜನರ ಒಲವಿತ್ತು. ಆದರೆ ಆ ಒಲವು ಪಕ್ಷದ ಪರ ಮತಗಳಾಗಿ ಪರಿವರ್ತನೆಯಾಗಿಲ್ಲ. ಚುನಾವಣೆ ನಡೆದ ರಾಜ್ಯಗಳಲ್ಲಿ ಜನರ ನಾಡಿ ಮಿಡಿತ ನಾವು ಅರಿಯುವಲ್ಲಿ ನಮ್ಮ ಪಕ್ಷ ವಿಫಲವಾಗಿದೆ.

ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಮತದಾರನ ಆದ್ಯತೆ ಏನು? ಯಾವುದಕ್ಕೆ ಪ್ರಾಶಸ್ತ್ಯ? ಎಂದು ತೋರಿಸಿಕೊಟ್ಟಿದೆ. BJP ಸರ್ಕಾರದ ಆಡಳಿತ ವೈಫಲ್ಯ, ದುಬಾರಿ ಜೀವನ,ರೈತರ ಶೋಷಣೆ ಚುನಾವಣೆಯ ವಸ್ತು ವಿಷಯ ಎಂದು ಭಾವಿಸಲಾಗಿತ್ತು. ಆದರೆ ಜನರಿಗೆ ಈ ವಿಷಯಗಳಿಗಿಂತ ಕೋಮು ಸಂಗತಿಗಳೇ ಆದ್ಯತೆಯಾದಂತಿದೆ. ಈ ಫಲಿತಾಂಶ ಅಪಾಯಕಾರಿ ಬೆಳವಣಿಗೆಯ ಅಪಶಕುನವಿದ್ದಂತೆ.

ನನ್ನ ಉಸ್ತುವಾರಿಯಲ್ಲಿದ್ದ ಗೋವಾದಲ್ಲಿ ನಮ್ಮ ಪಕ್ಷ ಅಧಿಕಾರ ಹಿಡಿಯದ ನಿರಾಸೆಯಿದ್ದರೂ ಪಕ್ಷದ ಸಾಧನೆ ಸ್ವಲ್ಪ ಮಟ್ಟಿಗೆ ಸಮಾಧಾನ ತಂದಿದೆ. BJP ಯ ಷಡ್ಯಂತ್ರ ಹಾಗೂ ಕುದುರೆ ವ್ಯಾಪಾರದಿಂದ ಶೂನ್ಯದಲ್ಲಿದ್ದ ಕಾಂಗ್ರೆಸ್ 11 ಸ್ಥಾನ ಗಳಿಸಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಪಂಜಾಬ್ ಫಲಿತಾಂಶ ಪಕ್ಷದ ಮಟ್ಟಿಗೆ ದೊಡ್ಡ ಆಘಾತ.

ಉತ್ತರಾಖಂಡ ಹಾಗೂ ಮಣಿಪುರದಲ್ಲೂ ನಾವು ನಿರೀಕ್ಷಿಸಿದ ಫಲಿತಾಂಶ ಬಂದಿಲ್ಲ. ಆದರೆ ಈ ರಾಜ್ಯಗಳಲ್ಲಿ ಪಕ್ಷದ ಸಂಘಟನಾ ಕೊರತೆಯೇ ಈ ಫಲಿತಾಂಶಕ್ಕೆ ಕಾರಣ. ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯವನ್ನು ನಾವು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವಲ್ಲಿ ಎಡವಿದ್ದೇವೆ. ಇದರ ಲಾಭ ಪಡೆದುಕೊಂಡಿರುವ ಬಿಜೆಪಿ ಈ ರಾಜ್ಯಗಳಲ್ಲಿ ಜನಾದೇಶ ಪಡೆದುಕೊಂಡಿದೆ.

ಪಂಚರಾಜ್ಯ ಚುನಾವಣಾ ಫಲಿತಾಂಶವನ್ನು ನಾನು ಬಿಜೆಪಿಯ ಗೆಲುವು ಅಥವಾ ಕಾಂಗ್ರೆಸ್‌ನ ಸೋಲು ಎಂದು ವಿಶ್ಲೇಷಿಸಲು ಹೋಗುವುದಿಲ್ಲ‌. ಈ ಫಲಿತಾಂಶ ಈ ದೇಶದ ಭವಿಷ್ಯದ ಸೋಲು ಎಂದು ಮಾತ್ರ ಹೇಳಬಲ್ಲೆ. ಬಿಜೆಪಿ ಪ್ರತಿಪಾದಿಸುತ್ತಿರುವ ಧರ್ಮಾಧಾರಿತ ಸಂಗತಿಗಳು ತಮ್ಮ ಹೊಟ್ಟೆ ತುಂಬಿಸುವುದಿಲ್ಲ ಎಂಬ ಸತ್ಯ ಮತದಾರನಿಗೆ ಅರಿವಾಗುವವರೆಗೂ ಈ ರೀತಿಯ ಫಲಿತಾಂಶ ನಿರೀಕ್ಷಿತ ಎಂದು ಟ್ವೀಟ್ ನಲ್ಲಿ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

Leave a Reply

Your email address will not be published. Required fields are marked *