ಕೋವಿಡ್ ಲಾಕ್‌ಡೌನ್: ಮನೆಯಲ್ಲೇ ಉಳಿಯುವಂತೆ ಜನತೆಗೆ ಕೇಜ್ರಿವಾಲ್ ಮನವಿ

ಕೋವಿಡ್ ಲಾಕ್‌ಡೌನ್: ಮನೆಯಲ್ಲೇ ಉಳಿಯುವಂತೆ ಜನತೆಗೆ ಕೇಜ್ರಿವಾಲ್ ಮನವಿ

ನವದೆಹಲಿ, ಏಪ್ರಿಲ್ 20  ಆರು ದಿನಗಳ ಕೋವಿಡ್‍ ಲಾಕ್‌ಡೌನ್ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿ ಜನರು ತಮ್ಮ ಮನೆಗಳಲ್ಲೇ ಉಳಿದು ಸರ್ಕಾರದೊಂದಿಗೆ ಸಹಕರಿಸುವಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಂಗಳವಾರ ಮನವಿ ಮಾಡಿದ್ದಾರೆ.
‘ದೆಹಲಿಯಲ್ಲಿ ಲಾಕ್‌ಡೌನ್ ಪ್ರಾರಂಭವಾಗಿದೆ. ನಿಮ್ಮ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ದಯವಿಟ್ಟು ಸರ್ಕಾರದೊಂದಿಗೆ ಸಹಕರಿಸಿ, ನಿಮ್ಮ ಮನೆಯಲ್ಲಿಯೇ ಇರಿ, ಸೋಂಕನ್ನು ತಪ್ಪಿಸಿ.’ ಎಂದು ಶ್ರೀ ಕೇಜ್ರಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ಕೋವಿಡ್‍ ನ 23,686 ಹೊಸ ಪ್ರಕರಣಗಳ ಭಾರಿ ಏರಿಕೆ ವರದಿಯಾಗಿದೆ. ಈ ಅವಧಿಯಲ್ಲಿ 240 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹೊಸ ಪ್ರಕರಣಗಳೊಂದಿಗೆ ದೆಹಲಿಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 8,77,146 ಕ್ಕೆ ಮತ್ತು ಸಾವಿನ ಸಂಖ್ಯೆ 12,361 ಕ್ಕೆ ತಲುಪಿದೆ.
ದೆಹಲಿಯ ಪಾಸಿಟಿವಿಟಿ ಪ್ರಮಾಣ ಭಾನುವಾರ ಶೇ 29.74ರಷ್ಟಿದ್ದರೆ, ಸೋಮವಾರ 26.12 ಕ್ಕೆ ಇಳಿದಿದೆ.
ಕೊರೋನವೈರಸ್ ಪ್ರಕರಣಗಳ ಉಲ್ಬಣದ ಹಿನ್ನೆಲೆಯಲ್ಲಿ ಸೋಮವಾರ (ಏ 19) ರಾತ್ರಿ 10ಗಂಟೆಯಿಂದ ಮುಂದಿನ ಸೋಮವಾರ (ಏ 26) ರ ಬೆಳಗಿನ ಜಾವ 5 ಗಂಟೆಯವರೆಗೆ ದೆಹಲಿಯಲ್ಲಿ ಆರು ದಿನಗಳ ಲಾಕ್ ಡೌನ್ ಅನ್ನು ಕೇಜ್ರಿವಾಲ್ ಸೋಮವಾರ ಘೋಷಿಸಿದ್ದರು. ಸರ್ಕಾರಿ ಆದೇಶದಂತೆ, ಆರು ದಿನಗಳ ಲಾಕ್‌ಡೌನ್ ಅವಧಿಯಲ್ಲಿ, ತುರ್ತು ಮತ್ತು ಅಗತ್ಯ ಸೇವೆಗಳಲ್ಲಿ ಕೆಲಸ ಮಾಡುವ ಜನರಿಗೆ ಸಂಚರಿಸಲು ಅವಕಾಶವಿರುತ್ತದೆ, ಗರ್ಭಿಣಿಯರು, ರೋಗಿಗಳು ಆಸ್ಪತ್ರೆಗಳು, ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಬಹುದಾಗಿದೆ. ಜನರು ವಿಮಾನ, ರೈಲುಗಳು ಮತ್ತು ಬಸ್‍ ಗಳಿಗೆ ಹತ್ತುವುದಕ್ಕೆ ಅವಕಾಶವಿರುತ್ತದೆ. ಮಾಧ್ಯಮ ಪ್ರತಿನಿಧಿಗಳಿಗೆ ಲಾಕ್‍ಡೌನ್‍ನಿಂದ ವಿನಾಯಿತಿ ನೀಡಲಾಗಿದೆ.ಹಣ್ಣು, ತರಕಾರಿ ಮಾರಾಟಗಾರರು, ಕಿರಾಣಿ ಅಂಗಡಿಗಳು, ಬ್ಯಾಂಕ್‍ಗಳು, ಎಟಿಎಂಗಳು, ಪೆಟ್ರೋಲ್ ಪಂಪ್‌ಗಳು, ಅಗತ್ಯ ವಸ್ತುಗಳ ಉತ್ಪಾದನಾ ಘಟಕಗಳು, ಶೈತ್ಯಾಗಾರಗಳು ಮತ್ತು ಪಾರ್ಸೆಲ್‍ ನೀಡುವ ರೆಸ್ಟೋರೆಂಟ್‌ಗಳಿಗೆ ಅನುಮತಿ ನೀಡಲಾಗಿದೆ. ಅಂತ್ಯಕ್ರಿಯೆಯಲ್ಲಿ 20 ಮಂದಿ ,ಮದುವೆಗಳಲ್ಲಿ 50 ಮಂದಿ ಮಾತ್ರ ಪಾಲ್ಗೊಳ್ಳಲು ಅವಕಾಶವಿದೆ. ಇನ್ನು, ಸಭೆ, ಸಮಾರಂಭ ಮತ್ತು ಕೂಟಗಳನ್ನು ನಿಷೇಧಿಸಲಾಗಿದೆ. ಅಲ್ಲದೆ, ಎಲ್ಲಾ ಧಾರ್ಮಿಕ ಸ್ಥಳಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ.

, , ,

Leave a Reply

Your email address will not be published. Required fields are marked *