ಕಾಂಗ್ರೆಸ್ ಶಾಸಕ ಬಿ. ನಾರಾಯಣರಾವ್ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಂತಾಪ

ಬೆಗಳೂರು:

ಬಸವಕಲ್ಯಾಣ ಶಾಸಕ ಹಾಗೂ ಕಾಂಗ್ರೆಸ್ ನಾಯಕ ಬಿ.ನಾರಾಯಣರಾವ್ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.

‘ಕೊರೋನಾ ಕ್ರೌರ್ಯ ಮುಂದುವರಿದಿದೆ. ನಮ್ಮ ಶಾಸಕ ಹಾಗೂ ಪಕ್ಷದ ನಿಷ್ಠಾವಂತ ನಾಯಕ ನಾರಾಯಣರಾವ್ ರನ್ನು ಕೊರೋನಾ ನಮ್ಮಿಂದ ದೂರ ಮಾಡಿದೆ.

ಬಡವರು, ದೀನದಲಿತರ ಪರ ವಿಶೇಷ ಕಾಳಜಿ ಹೊಂದಿದ್ದ ನಾರಾಯಣರಾವ್ ಅವರ ಏಳಿಗೆಗಾಗಿ ಶ್ರಮಿಸಿದ್ದರು. ಉತ್ತಮ ನಡೆ ನುಡಿ ಮೂಲಕ ಜನರಿಗೆ ಹತ್ತಿರವಾಗಿದ್ದ ನಾರಾಯಣರಾವ್ ಅವರನ್ನು ಕಳೆದುಕೊಂಡಿರುವುದು ಪಕ್ಷಕ್ಕೆ ಹಾಗೂ ರಾಜ್ಯದ ಜನತೆಗೆ ನಷ್ಟ ಉಂಟಾಗಿದೆ.

ನಾರಾಯಣರಾವ್ ಅವರು ಉತ್ತಮ ವಾಗ್ಮಿಯಾಹಿದ್ದು, ಪಕ್ಷದ ಸಿದ್ಧಾಂತವನ್ನು ತಮ್ಮ ನೇರ ನುಡಿಗಳ ಮೂಲಕ ಮಂಡಿಸುತ್ತಿದ್ದರು. ಕಳೆದ ತಿಂಗಳ ಅಂತ್ಯದಲ್ಲಿ ಅವರಿಗೆ ಸೋಂಕು ತಗುಲಿರುವುದು ಖಚಿತವಾದ ನಂತರ ಆಸ್ಪತ್ರೆ ಸೇರಿದ್ದರು. ನಂತರ ಚೇತರಿಕೆ ಕಂಡಿದ್ದರು. ‘ನಾನು ಚೇತರಿಸಿಕೊಳ್ಳುತ್ತಿದ್ದೇನೆ’ ಎಂದು ದೂರವಾಣಿ ಮೂಲಕ ತಿಳಿಸಿದ್ದರು.

ಆದರೆ ಮತ್ತೆ ಅವರ ಆರೋಗ್ಯ ಕ್ಷೀಣಿಸಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಈಗ ಅವರು ನಮ್ಮನ್ನು ಅಗಲಿದ್ದಾರೆ. ಪಕ್ಷಕ್ಕೆ ಹಾಗೂ ಉತ್ತರ ಕರ್ನಾಟಕ ಭಾಗದ ಜನರ ಸೇವೆ ಸಲ್ಲಿಸಿದ್ದ ನಾರಾಯಣರಾವ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ ಸದಸ್ಯರು, ಅಭಿಮಾನಿಗಳಿಗೆ ಕರುಣಿಸಲಿ’ ಎಂದು ಡಿ.ಕೆ ಶಿವಕುಮಾರ್ ತಮ್ಮ ಸಂತಾಪ ನುಡಿಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *