Menu

ಗೌರಿಬಿದನೂರಲ್ಲಿ ಕುಸುಮ್- ಸಿ ಯೋಜನೆಗೆ ನಾಳೆ ಸಿಎಂ ಚಾಲನೆ: ಸಚಿವ ಡಾ.ಎಂ.ಸಿ.ಸುಧಾಕರ್

mc sudhakar

ಗೌರಿಬಿದನೂರು, ಜೂ. 10, 2025: ಕೃಷಿ ಫೀಡರ್ ಗಳ ಸೌರೀಕರಣದ ಮೂಲಕ ರೈತರ ಕೃಷಿ ಪಂಪ್ ಸೆಟ್ ಗಳಿಗೆ ಹಗಲು ವೇಳೆ ಸಮರ್ಪಕ ವಿದ್ಯುತ್ ಪೂರೈಸುವ ಕುಸುಮ್- ಸಿ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಉದ್ಘಾಟಿಸಲಿದ್ದಾರೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿಯೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದ್ದಾರೆ.

ಉದ್ಘಾಟನಾ ಕಾರ್ಯಕ್ರಮ ನಡೆಯಲಿರುವ ಇಲ್ಲಿನ ನೇತಾಜಿ ತಾಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ಸಿದ್ಧತಾ ಕಾರ್ಯ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಜೂನ್ 11ರ ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೊಂಡೇಬಾವಿ ಹೋಬಳಿ ಹನುಮೇನಹಳ್ಳಿಯಲ್ಲಿ ಸ್ಥಾಪಿಸಿರುವ ಸೋಲಾರ್ ಘಟಕವನ್ನು ಲೋಕಾರ್ಪಣೆಗೊಳಿಸುವರು. ಬಳಿಕ 11 ಗಂಟೆಗೆ ನೇತಾಜಿ ಕ್ರೀಡಾಂಗಣಲ್ಲಿ ಕುಸುಮ್- ಸಿ ಯೋಜನೆಯನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ,” ಎಂದರು.

“ಕಾರ್ಯಕ್ರಮದಲ್ಲಿ ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ಹಾಗೂ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಪಡಿತರ ವಿತರಣೆ ಸಚಿವರಾದ ಪ್ರಲ್ಹಾದ್ ಜೋಶಿ, ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವರಾದ ಶ್ರೀಪಾದ್‌ ಯೆಸ್ಸೋ ನಾಯಕ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಇಂಧನ ಸಚಿವ ಕೆ.ಜೆ.ಜಾರ್ಜ್,ಕಂದಾಯ ಸಚಿವ ಕೃಷ್ಣ ಬೈರೇಗೌಡ , ಮಾಜಿ ಸ್ಪೀಕರ್ ಎನ್.ಎಚ್.ಶಿವಶಂಕರರೆಡ್ಡಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಕ್ಷೇತ್ರದ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ,” ಎಂದರು.

“ಗೌರಿಬಿದನೂರು ತಾಲೂಕಿನ ತೊಂಡೇಬಾವಿ ಹೋಬಳಿ ಹನುಮೇನಹಳ್ಳಿ ಮತ್ತು ಚರಕಮಟ್ಟೇನಹಳ್ಳಿ ಗ್ರಾಮದ ಸುಮಾರು 60 ಎಕರೆ ಪ್ರದೇಶದಲ್ಲಿ 20 ಮೆ.ವ್ಯಾ. ಸಾಮರ್ಥ್ಯದಲ್ಲಿ ಸೋಲಾರ್ ಘಟಕ ಸ್ಥಾಪಿಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿ ಕುಸುಮ್- ಸಿ ಯೋಜನೆಯಡಿ ಸ್ಥಾಪಿಸಲಾಗಿರುವ ಅತಿ ದೊಡ್ಡ ಘಟಕವಿದು. ಹೀಗಾಗಿ ಗೌರಿಬಿದನೂರಿನಲ್ಲಿ ಯೋಜನೆಯನ್ನು ಉದ್ಘಾಟಿಸಲು ಮುಖ್ಯಮಂತ್ರಿಗಳು ಮತ್ತು ಇಂಧನ ಸಚಿವರು ನಿರ್ಧರಿಸಿದ್ದಾರೆ. ರಾಜ್ಯ ಮಟ್ಟದ ಬೃಹತ್ ಯೋಜನೆಯೊಂದ್ನು ಉದ್ಘಾಟಿಸಲು ಗೌರಿಬಿದನೂನ್ನು ಆಯ್ಕೆ ಮಾಡಿಕೊಡಿದ್ದಕ್ಕಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಇಂಧನ ಸಚಿವರಿಗೆ ಜಿಲ್ಲೆಯ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ,” ಎಂದು ಹೇಳಿದರು.

ಇಂಧನ ಸಚಿವರ ಕಾಳಜಿಗೆ ಪ್ರಶಂಸೆ:

“ಕುಸುಮ್ – ಸಿ ಯೋಜನೆ ನಾಲ್ಕೈದು ವರ್ಷ ಹಿಂದೆಯೇ ಜಾರಿಯಾಗಿತ್ತಾದರೂ ರಾಜ್ಯದಲ್ಲಿ ಅನುಷ್ಠಾನಗೊಂಡಿರಲಿಲ್ಲ. ಆದರೆ, ಕೆ.ಜೆ.ಜಾರ್ಜ್ ಅವರು ಇಂಧನ ಸಚಿವರಾದ ಮೇಲೆ ಸೋಲಾರ್ ವಿದ್ಯುತ್ ಪಂಪ್ ಸೆಟ್ ಒದಗಿಸುವ ಕುಸುಮ್- ಬಿ ಮತ್ತು ಫೀಡರ್ ಸೋಲರೈಸೇಷನ್ ಮೂಲಕ ರೈತರ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಸುವ ಕುಸುಮ್-ಸಿ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಿದರು. ರೈತರ ವಿದ್ಯುತ್ ಸಮಸ್ಯೆ ಬಗೆಹರಿಯಬೇಕಾದರೆ ಈ ಯೋಜನೆಗಳು ಅನಿವಾರ್ಯ ಎಂದು ಖುದ್ದಾಗಿ ಆಸಕ್ತಿ ವಹಿಸಿ ಜಾರಿಗೊಳಿಸಿದರು. ಅದರ ಪರಿಣಾಮ ಇಂದು ರಾಜ್ಯಾದ್ಯಂತ ಕುಸುಮ್- ಸಿ ಯೋಜನೆ ಅತ್ಯಂತ ವೇಗವಾಗಿ ಅನುಷ್ಠಾನಗೊಳ್ಳುತ್ತಿದೆ,” ಎಂದು ತಿಳಿಸಿದರು.

“ಕುಸುಮ್- ಸಿ ಯೋಜನೆಯಡಿ ಟೆಂಡರ್ ನಲ್ಲಿ ಭಾಗವಹಿಸಿ ಯಶಸ್ವಿಯಾದ ಖಾಸಗಿ ಗುತ್ತಿಗೆದಾರರು ಸೋಲಾರ್ ವಿದ್ಯುತ್ ಉತ್ಪಾದನೆ ಮಾಡುತ್ತಾರೆ. ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ 4 ಎಕರೆ ಜಮೀನು ಬೇಕಾಗಿದ್ದು, ಸುಮಾರು 3.5ರಿಂದ 4 ಕೋಟಿ ರೂ. ವೆಚ್ಚವಾಗುತ್ತದೆ. ಈ ಪೈಕಿ 1.05 ಕೋಟಿ ರೂ. ಕೇಂದ್ರ ಸರ್ಕಾರದಿಂದ ಸಹಾಯಧನ ಸಿಗುತ್ತದೆ. ಸರ್ಕಾರ ಪ್ರತಿ ಮೆಗಾವ್ಯಾಟ್ ಗೆ ಗರಿಷ್ಠ 3.17 ರೂ.ವರೆಗೆ ಪಾವತಿಸಿ ಆ ವಿದ್ಯುತ್ ಖರೀದಿಸಿ ರೈತರ ಪಂಪ್ ಸೆಟ್ ಗಳಿಗೆ ಒದಗಿಸುತ್ತದೆ,” ಎಂದು ಮಾಹಿತಿ ನೀಡಿದರು.

“ವಿದ್ಯುತ್ ಉಪ ಕೇಂದ್ರಗಳ ಬಳಿ ಕುಸುಮ್-ಸಿ ಯೋಜನೆಯಡಿ ಸೋಲಾರ್ ಘಟಕಗಳನ್ನು ಸ್ಥಾಪಿಸಲಾಗುತ್ತದೆ. ಸರ್ಕಾರಿ ಭೂಮಿ ಲಭ್ಯವಿದ್ದರೆ ಅದನ್ನು ಉಚಿತವಾಗಿ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದೇಶಿಸಿದ್ದಾರೆ. ಆದರೆ, ಆ ಭೂಮಿಗೆ ಪ್ರತಿ ಎಕರೆಗೆ 25 ಸಾವಿರ ರೂ. ಅನ್ನು ಖಾಸಗಿ ವಿದ್ಯುತ್ ಉತ್ಪಾದಕರು ಪಾವತಿಸಬೇಕು. ಆ ಮೊತ್ತವನ್ನು ಜಿಲ್ಲಾಧಿಕಾರಿಗಳ ಬಳಿ ಇಟ್ಟು ಉಪ ಕೇಂದ್ರ ಇರುವ ಗ್ರಾಮದ ಸರ್ಕಾರಿ ಶಾಲೆ, ಅಂಗನವಾಡಿಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು. ಖಾಸಗಿ ಭೂಮಿಯಾಗಿದ್ದರೆ, ವಿದ್ಯುತ್ ಉತ್ಪಾದನೆ ಗುತ್ತಿಗೆ ಪಡೆದ ಡೆವಲಪರ್‌ಗಳು ಗುತ್ತಿಗೆಗೆ ತೆಗೆದುಕೊಂಡು, ಭೂಮಾಲೀಕರಿಗೆ ಎಕರೆಗೆ ವಾರ್ಷಿಕ ಕನಿಷ್ಠ 25,000 ರೂ. ಪರಿಹಾರ ನೀಡುತ್ತಾರೆ,” ಎಂದು ಹೇಳಿದರು.

“ರೈತರಿಗೆ ಹಗಲು ವೇಳೆ ಸಮರ್ಪಕ ವಿದ್ಯುತ್ ಪೂರೈಸುವ ಉದ್ದೇಶದಿಂದ ಕುಸುಮ್-ಸಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ನೀರಾವರಿಗೆ ವಿದ್ಯುತ್ ಪೂರೈಸುವ ಫೀಡರ್‌ಗಳ ಬಳಿ ಸೋಲಾರ್ ಘಟಕಗಳನ್ನು ಸ್ಥಾಪಿಸಿ, ವಿದ್ಯುತ್ ಉತ್ಪಾದಿಸಲಾಗುವುದು. ಬಳಿಕ ಅಲ್ಲಿಂದ ಫೀಡರ್‌ಗಳ ಮೂಲಕ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಒದಗಿಸಲಾಗುವುದು. ಸ್ಥಳೀಯವಾಗಿಯೇ ವಿದ್ಯುತ್ ಉತ್ಪಾದಿಸಿ ಪೂರೈಸುವುದರಿಂದ ಗುಣಮಟ್ಟದ ವಿದ್ಯುತ್ ಲಭ್ಯವಾಗುತ್ತದೆ. ಟ್ರಾನ್ಸ್‌ಫರ್ಮರ್‌ಗಳ ಮೇಲಿನ ಹೊರೆಯೂ ಇದರಿಂದ ತಗ್ಗುತ್ತದೆ. ಅಲ್ಲದೆ, ರೈತರು ಹಗಲು ವೇಳೆ ಸೋಲಾರ್ ವಿದ್ಯುತ್ ಬಳಸುವುದರಿಂದ ರಾತ್ರಿ ವೇಳೆ ಇತರೆ ಉದ್ದೇಶಗಳಿಗೆ ಹೆಚ್ಚುವರಿ ವಿದ್ಯುತ್ ಲಭ್ಯವಾಗುತ್ತದೆ,” ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *