ಆರು ತಿಂಗಳಿನಲ್ಲಿ ಕಾಮನ್‌ ಮ್ಯಾನ್‌ ಜನತೆ ಮನಮುಟ್ಟಿದ್ದಾರೆಯೇ?

ಬೆಂಗಳೂರು: (ಉದಯಕಾಲ) ರಾಜಕೀಯದಲ್ಲಿ ಎಷ್ಟೇ ಅರ್ಹತೆ ಇದ್ದರೂ ಅದೃಷ್ಟ ಜೊತೆಗಿದ್ದರೆ ಮಾತ್ರ ಅವಕಾಶ ಒಲಿದು ಬರುತ್ತದೆ. ರಾಜ್ಯ ಬಿಜೆಪಿಯಲ್ಲಿ ಬಸವರಾಜ ಎಸ್ ಬೊಮ್ಮಾಯಿ ಅವರ ಅರ್ಹತೆಗೆ ಅದೃಷ್ಟ ಜೊತೆಯಾಗಿದ್ದರಿಂದ ಸಂಘ ಪರಿವಾರದವರಲ್ಲದಿದ್ದರೂ, ಕಟ್ಟಾ ಹಿಂದುತ್ವವಾದಿಯಲ್ಲದಿದ್ದರೂ ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗುವ ಯೋಗ ಲಭಿಸಿತು.
ಯೋಗ ಬರುವುದು ಒಂದೇ ಸಾರಿ, ಯೋಗ್ಯತೆ ಇದ್ದರೆ ಮಾತ್ರ ರಾಜಕೀಯದಲ್ಲಿ ಹಾಗೂ ಅಧಿಕಾರದಲ್ಲಿ ಉಳಿಯಲು ಸಾಧ್ಯ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮಗೆ ಬಂದಿರುವ ಯೋಗವನ್ನು ಯೋಗ್ಯತೆಯಿಂದ ಉಳಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ ಎಂಬುದೇ ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಿರುವ ಮಾತು
ಮಹಾಮಾರಿ ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿಯೇ ಅಧಿಕಾರಕ್ಕೆ ಬಂದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಆರಂಭದಿಂದಲೂ ಪ್ರಾಕೃತಿಕ ಹಾಗೂ ರಾಜಕೀಯ ಸವಾಲುಗಳನ್ನು ಎದುರಿಸುತ್ತ, ಪಕ್ಷದಲ್ಲಿ ನಾಯಕತ್ವದ ಸಂಘರ್ಷಕ್ಕೂ ಎದೆಯೊಡ್ಡಿ ಸಣ್ಣಗೆ ಸಾಧನೆ ಮಾಡುತ್ತ ಆರು ತಿಂಗಳು ಅಧಿಕಾರ ಪೂರೈಸಿದೆ.
ಯಡಿಯೂರಪ್ಪ ಅವರು ನಾಯಕತ್ವದಿಂದ ಕೆಳಗಿಳಿದ ಸಂದರ್ಭ. ಮುಂದೆ ಯಾರು ಮುಖ್ಯಮಂತ್ರಿ ಎಂಬ ಪ್ರಶ್ನೆ ಹೈಕಮಾಂಡಿನ ಮುಂದೆ ಬೃಹದಾಕಾರವಾಗಿ ನಿಂತಿತ್ತು. ಎಲ್ಲರ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಸಮಚಿತ್ತದಿಂದ ಆಡಳಿತ ನಡೆಸುವುದರ ಜೊತೆಗೆ ಪಕ್ಷದ ವರ್ಚಸ್ಸನ್ನು ಇನ್ನಷ್ಟು ಹೆಚ್ಚಿಸುವ ಮುಖ ಅವರಿಗೆ ಬೇಕಿತ್ತು.

ಹೈಕಮಾಂಡಿಗೂ ಸಮ್ಮತ:

ಬಿ.ಎಸ್.ವೈ. ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಅವರ ಹೆಸರು ಸೂಚಿಸಿದಾಗ ನಿರಾಕರಿಸಲು ಬೇಕಾದ ಯಾವ ಕಾರಣವೂ ಹೈ ಕಮಾಂಡ್‌ ಬಳಿ ಇರಲಿಲ್ಲ. ಅವರಿಗೂ ಸಮ್ಮತವೆನ್ನಿಸಿತು. ಹಸಿರು ನಿಶಾನೆ ದೊರೆಯಿತು. ಬಸವರಾಜ ಸೋಮಪ್ಪ ಬೊಮ್ಮಾಯಿ ಅವರಿಗೆ ನಾಡನ್ನಾಳುವ ಅಧಿಕಾರ ಪಟ್ಟ ದೊರೆಯಿತು.

ಯಡಿಯೂರಪ್ಪ ಅವರ ಆಯ್ಕೆಯೇ ಎಂದು ಬಿಂಬಿತ ಆಗಿರುವ ಬಸವರಾಜ ಬೊಮ್ಮಾಯಿ ಅವರ ಆರು ತಿಂಗಳ ಅಧಿಕಾರ ಹೂವಿನ ಹಾದಿಯೇನು ಆಗಿರಲಿಲ್ಲ. ಬಿಜೆಪಿಯಂತಹ ಪಕ್ಷದಲ್ಲಿ ಹೈಕಮಾಂಡ್ ಹೊರತಾಗಿಯೂ ಆರ್ ಎಎಸ್ ಎಂಬ ಇನ್ನೊಂದು ಕಮಾಂಡ್ ನ ಕಣ್ಗಾವಲಿನಲ್ಲಿಯೇ ಆಡಳಿತ ನಡೆಸುವುದು ಸುಲಭದ ಕೆಲಸವಲ್ಲ.
ಏಕಾಂಗಿಯಾಗಿ ಅಧಿಕಾರ ವಹಿಸಿಕೊಂಡ ಬಸವರಾಜ ಬೊಮ್ಮಾಯಿ ಅವರು ಅಬ್ಬರದ ಆಡಳಿತಕ್ಕೆ ಅಣಿಯಿಡದೇ ತಮ್ಮದೇ ಆದ ಛಾಪು ಮೂಡಿಸುವ ನಿಟ್ಟಿನಲ್ಲಿ ರೈತರ ಮಕ್ಕಳಿಗಾಗಿ ಮುಖ್ಯಮಂತ್ರಿ ವಿದ್ಯಾನಿಧಿ ಯೋಜನೆ ಹಾಗೂ ಸಾಮಾಜಿಕ ಭದ್ರತೆ ಯೋಜನೆ ಅಡಿಯಲ್ಲಿ ಪಿಂಚಣಿ ಹೆಚ್ಚಳ ಮಾಡಿ ತಮ್ಮ ಆಡಳಿತ ಹಾಗೂ ಅಭಿವೃದ್ಧಿಯ ಗುರಿ ಯಾವ ಕಡೆಗೆ ಇರುತ್ತದೆ ಎನ್ನುವ ಮನ್ಸೂಚನೆ ನೀಡಿದರು. ಈ ಮೂಲಕ ಆಡಳಿತದ ಮೊದಲ ದಿನವೇ ಹೊಸ ಭರವಸೆ ಮೂಡಿಸಿದರು..
ಕಾಮನ್ ಮ್ಯಾನ್ ಬ್ರಾಂಡ್:
ಕೆಲವರು ತಮಗಿರುವ ಸವಲತ್ತುಗಳನ್ನು ಸಾಧ್ಯವಾದಷ್ಟು ಬಳಸಿಕೊಳ್ಳಲು ಎಲ್ಲ ಮಾರ್ಗಗಳನ್ನು ಅನುಸರಿಸುವುದು ಸಾಮಾನ್ಯ. ಆದರೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಿರುವ ಪ್ರೊಟೊಕಾಲ್‌ಗಳನ್ನು ಬದಿಗೊತ್ತಿ ಸಿಎಂ ಎಂಬ ಪದಕ್ಕೆ ಕಾಮನ್ ಮ್ಯಾನ್ ಎಂಬ ಅರ್ಥ ನೀಡಿ ತಾವೂ ಸಾಮಾನ್ಯರೊಳಗೊಬ್ಬ ಎಂಬ ಸಂದೇಶ ಸಾರುವ ಪ್ರಯತ್ನ ಮಾಡಿದರು. ಅದರಂತೆ ನಡೆದುಕೊಳ್ಳುತ್ತ ಜನ ಸಾಮಾನ್ಯರ ಮುಖ್ಯಮಂತ್ರಿಯಾಗಿ ಜನಮಾನಸದ ಮನಸಿನಲ್ಲಿ ಅಚ್ಚೊತ್ತಿದ್ದಾರೆ. ಮುಖ್ಯವಾಗಿ ಅಧಿಕಾರ ಸ್ವೀಕಾರ ಮಾಡಿದ ಆರಂಭದ ದಿನಗಳಲ್ಲಿಯೇ ಜನಮೆಚ್ಚುಗೆ ಗಳಿಸಿದವರು ವಿರಳ. ಇವರಲ್ಲಿ ಪ್ರಧಾನಿ ಮಂತ್ರಿಯಾಗಿದ್ದ ರಾಜೀವ್‌ ಗಾಂಧಿ, ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಅತೀ ಕಡಿಮೆ ಅವಧಿಯಲ್ಲಿ ಜನಪ್ರಿಯರೆನ್ನಿಸಿಕೊಂಡರು. ಇಂಥದ್ದೇ ಜನಪ್ರಿಯತೆ ಬೊಮ್ಮಾಯಿ ಅವರಿಗೆ ದೊರಕಿದೆ. ಅದೂ ತಾವೊಬ್ಬ ಕಾಮನ್‌ ಮ್ಯಾನ್‌ ಎಂಬ ಭಾವ ಸ್ವತಃ ಅವರಿಗಿರುವುದರಿಂದ ಎನ್ನಬಹುದು.
ಆರಂಭದಲ್ಲೆ ಸವಾಲುಗಳು:
ಮುಖ್ಯಮಂತ್ರಿಯಾದ ನಂತರ ಬೊಮ್ಮಾಯಿ ಅವರು ಒಂದೇ ಬಾರಿಗೆ ಸಂಪುಟ ವಿಸ್ತರಣೆ ಮಾಡಿದರು. ಕೆಲವು ಸಚಿವರು ತಮಗೆ ಬೇಕಾದ ಸಚಿವ ಸ್ಥಾನ ಸಿಗಲಿಲ್ಲ ಎಂದು ಬೇಸರಿಸಿಕೊಂಡರೂ ಅವರ ವಿರುದ್ಧ ಬಹಿರಂಗ ಅಸಮಾಧಾನ ಹೊರ ಹಾಕದೇ ಮಾತುಕತೆಯ ಮೂಲಕವೇ ಎಲ್ಲರನ್ನೂ ಸಮಾಧಾನಪಡಿಸುವಲ್ಲಿ ರಾಜಕೀಯ ಜಾಣ್ಮೆ ತೋರಿ ಆರಂಭದಲ್ಲಿಯೇ ಎದುರಾದ ಸವಾಲನ್ನು ಸಲೀಸಾಗಿ ತೆರೆಗೆ ಸರಿಸಿದರು. ಈ ಮೂಲಕ ತಮಗಿರುವ ರಾಜಕೀಯ ಪ್ರಬುದ್ಧತೆ ಎತ್ತಿ ತೋರಿಸಿದರು.
ರಾಜ್ಯದಲ್ಲಿ ಮುಂಗಾರು ಹಾಗೂ ಹಿಂಗಾರು ಅವಧಿಯಲ್ಲಿಯೂ ಎರಡು ಬಾರಿ ಪ್ರವಾಹ ಉಂಟಾಗಿ ಪ್ರಾಕೃತಿಕ ವಿಕೋಪದ ಸವಾಲು ಕೂಡ ಎದುರಾಗಿದ್ದು, ಅದನ್ನು ನಿಭಾಯಿಸುವಲ್ಲಿಯೂ ಮುಖ್ಯಮಂತ್ರಿ ಯಶಸ್ವಿಯಾಗಿದ್ದಾರೆ. ಬೆಳೆ ಕಳೆದುಕೊಂಡ ರೈತರಿಗೆ ಕೇಂದ್ರ ಸರ್ಕಾರ ನೀಡುವ ಪರಿಹಾರಕ್ಕೆ ರಾಜ್ಯದ ಪಾಲು ಸೇರಿಸಿ ಡಬಲ್ ಪರಿಹಾರ ನೀಡುವ ಮೂಲಕ ರೈತರ ಬಗ್ಗೆ ತಮಗಿರುವ ಕಾಳಜಿ ಎತ್ತಿ ತೋರಿಸಿದರು.
ಕೊರೊನಾ 3ನೇ ಅಲೆಯ ಭೀತಿ ಎದುರಾಗಿದ್ದರೂ, ಸರ್ಕಾರ ಅದಕ್ಕೆ ಪೂರಕವಾಗಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಸಿದ್ದತೆ ಮಾಡಿಕೊಂಡಿದ್ದರೂ, ಕೋವಿಡ್ ರೂಪಾಂತರಿ ಒಮಿಕ್ರಾನ್ ಅಷ್ಟೊಂದು ಆತಂಕಕಾರಿಯಾಗಿ ಪರಿಣಮಿಸದಿರುವುದರಿಂದ ಸರ್ಕಾರ ಲಾಕ್‌ಡೌನ್‌ನಂತಹ ಬಿಗಿ ನಿಲುವು ತೆಗೆದುಕೊಳ್ಳದೇ ಆರ್ಥಿಕವಾಗಿಯೂ ಯಾವುದೇ ಸಮಸ್ಯೆ‌ ಎದುರಾಗದಂತೆ ದೂಡಿಕೊಂಡು ಹೋಗುವ ಸ್ಥಿತಿ ಸರ್ಕಾರದ್ದಾಗಿದೆ. ಈ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿ ಅವರು ಪದೇಪದೇ ಹೇಳುತ್ತಿರುವ “ಜೀವವೂ ಮುಖ್ಯ; ಜೀವನವೂ ಮುಖ್ಯ” ಎಂಬುದು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ಸಮತೋಲನದ ಆಡಳಿತ:

ಕೊರೊನಾ ಹಿನ್ನೆಲೆಯಲ್ಲಿ ಆರ್ಥಿಕ ಇತಿ ಮಿತಿಯ ನಡುವೆಯೇ ಆರು ತಿಂಗಳಲ್ಲಿ ಕೆಲವು ಭರವಸೆ ಮೂಡಿಸುವಂತಹ ಯೋಜನೆಗಳನ್ನು ಜಾರಿಗೊಳಿಸಿರುವುದು ಬಸವರಾಜ ಬೊಮ್ಮಾಾಯಿ ನೇತೃತ್ವದ ಸರ್ಕಾರದ ಬಗ್ಗೆ ಸಮಾಧಾನ ಪಡುವ ಹಾಗೂ ಭರವಸೆ ಇಟ್ಟುಕೊಳ್ಳುವ ಸಂಗತಿ.
ರೈತರ ಮಕ್ಕಳಿಗೆ ವಿದ್ಯಾನಿಧಿ, ಸ್ವಾಂತಂತ್ರ್ಯೋತ್ಸವದ 75 ನೇ ವರ್ಷದ ಹಿನ್ನೆಲೆಯಲ್ಲಿ ಅಮೃತ ಯೋಜನೆಗಳು, ಮುಂಬೈ ಕರ್ನಾಟಕದ ಹೆಸರು ಬದಲಾಯಿಸಿ ಕಿತ್ತೂರು ಕರ್ನಾಟಕವೆಂದು ಮರು ನಾಮಕರಣ, ಗ್ರಾಮ ಒನ್ ಯೋಜನೆ, ಶಾಲಾ ಕಾಲೇಜುಗಳಲ್ಲಿ ರಾಯಣ್ಣ ಭಾವಚಿತ್ರ, ಬೆಳಗಾವಿ ಸುವರ್ಣ ಸೌಧದ ಎದುರು ಕಿತ್ತೂರು ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆ ನಿರ್ಮಾಣ ಮಾಡುವಂತಹ ರಾಜಕೀಯ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.
ಅದಕ್ಕಿಂತ ಹೆಚ್ಚಾಗಿ ಬಸವರಾಜ ಬೊಮ್ಮಾಯಿ ಅವರು ಜನತಾ ಪರಿವಾರದ ಮೂಲದವರಾಗಿದ್ದು, ಆರ್‌ಎಸ್‌ಎಸ್‌ನ ಹಿಂದುತ್ವವಾದವನ್ನು ಬಲವಾಗಿ ಪ್ರದರ್ಶನ ಮಾಡುವುದು ಅನುಮಾನ ಎಂಬ ಮಾತುಗಳಿಗೆ ಕಿವಿಗೊಡದೇ ಪಕ್ಷದ ಸಿದ್ದಾತಕ್ಕೂ ಚ್ಯುತಿ ಬಾರದಂತೆ ನೋಡಿಕೊಂಡು ಸಂಘ ಪರಿವಾರವು ಮೆಚ್ಚುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿರುವ ದೇವಸ್ಥಾನ ತೆರವು ಮಾಡದಂತೆ ತೀರ್ಮಾನ, ಮತಾಂತರ ನಿಷೇಧ ಕಾಯ್ದೆ ಹಿಂದೂ ದೇವಸ್ಥಾನಗಳನ್ನು ಮುಜರಾಯಿ ಇಲಾಖೆ ವ್ಯಾಪ್ತಿಯಿಂದ ಕೈಬಿಡುವುದು, ಅಕ್ರಮ ಗೋ ಸಾಗಾಣಿಕೆ ಮಾಡುವವರ ವಿರುದ್ಧ ಗೋರಕ್ಷಕರು ಮಾಡುವ ದಾಳಿಯ ಬಗ್ಗೆ ಮೃಧು ಧೋರಣೆಯಂತಹ ನಡೆಗಳು ಸಂಘಪರಿವಾರವೂ ಅವರ ನಾಯಕತ್ವವನ್ನು ಪ್ರಶ್ನೆ ಮಾಡದಂತೆ ಮಾಡಿದೆ.

ನಾಯಕತ್ವದ ಸವಾಲು
ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಾಲ್ಕೇ ತಿಂಗಳಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ಆರಂಭವಾಗಿತ್ತು. ಆದರೆ ಇದು ಒಂದು ರಾಷ್ಟ್ರೀಯ ಪಕ್ಷದ ಸರ್ಕಾರಕ್ಕೆ ಒಳ್ಳೆಯ ಬೆಳವಣಿಗೆಯಾಗಿರಲಿಲ್ಲ. ಇದರ ಪರಿಣಾಮ ಪಕ್ಷದ ಮೇಲೆ ಕೇವಲ ರಾಜ್ಯಮಟ್ಟದಲ್ಲಿ ಅಷ್ಟೇ ಅಲ್ಲದೇ ರಾಷ್ಟ್ರ ಮಟ್ಟದಲ್ಲಿಯೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಪ್ರಮುಖವಾಗಿ ಬಸವರಾಜ ಬೊಮ್ಮಾಯಿ ಅವರ ಆಡಳಿತ ವೈಖರಿಯ ಬಗ್ಗೆ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಕೂಡ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತಪಡಿಸಿ ಅವರ ರಾಜೀನಾಮೆ ಕೇಳುವಂತಹ ಬೆಳವಣಿಗೆಗಳಿಗೆ ಅವಕಾಶ ನೀಡದಿರುವುದು ಸಹ ಗಮನಾರ್ಹ.

ಸರ್ಕಾರದ ವಿರುದ್ಧ ಶೇಕಡ 40% ಭ್ರಷ್ಟಾಚಾರದ ಆರೋಪ ಕೇಳಿ ಬಂದರೂ ಇದರ ಬಗ್ಗೆ ಪ್ರತಿಪಕ್ಷಗಳೂ ಒರೆಗೆ ಹಚ್ಚಿ ಹೋರಾಟ ಮಾಡದ ಸ್ಥಿತಿ ಇರುವುದರಿಂದ ಈ ಆರೋಪ ರಾಜಕೀಯ ಮೇಲಾಟಕ್ಕೆ ಮಾತ್ರ ಸೀಮಿತವಾಗುವಂತಾಗಿದೆ. ಆದರೆ, ಬಿಜೆಪಿಯಲ್ಲಿಯೇ ಆಂತರಿಕ ಸಂಘರ್ಷದಿಂದ ಮೂಲ ಬಿಜೆಪಿಗರು ಹಾಗೂ ಬಸವರಾಜ ಬೊಮ್ಮಾಾಯಿ ಅವರ ನಡುವಿನ ಮುಸುಕಿನ ಸಂಘರ್ಷ ತೆರೆ ಮರೆಯಲ್ಲಿ ನಾಯಕತ್ವ ಬದಲಾವಣೆಯ ಸುದ್ದಿಯನ್ನು ಜೀವಂತವಾಗಿಡುವಂತೆ ಮಾಡಿದ್ದು ಆಡಳಿತ ಯಂತ್ರದ ಮೇಲೆ ಪರಿಣಾಮ ಬೀರುವಂತೆ ಮಾಡಿತ್ತು. ಈ ಆರುತಿಂಗಳ ಗಮನಾರ್ಹ ಬೆಳವಣಿಗೆಯೆಂದರೆ ಬೊಮ್ಮಾಯಿ ನಾಯಕತ್ವವನ್ನು ಪ್ರಶ್ನೆ ಮಾಡುವ ಪ್ರವೃತ್ತಿಗೆ ಬಲವಾದ ತಡೆ ಬಿದ್ದಿದೆ.
ಬಿಟ್ ಕಾಯಿನ್ ಪ್ರಕರಣ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿದರೂ, ಪ್ರತಿಪಕ್ಷಗಳೂ ಕೂಡ ಈ ಬಗ್ಗೆ ಸೂಕ್ತ ದಾಖಲೆ ನೀಡದೇ ಕೇವಲ ಆರೋಪಕ್ಕೆ ಸೀಮಿತವಾಗಿದ್ದರಿಂದ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಎದುರಾಗಿದ್ದ ದೊಡ್ಡ ಕಳಂಕವೊಂದು ತಪ್ಪಿದಂತಾಗಿದ್ದು, ನಿಟ್ಟುಸಿರುವ ಬಿಡುವಂತಾಗಿದೆ.

ಗಟ್ಟಿ ನಿರ್ಧಾರಗಳ ದಿಟ್ಟ ನಾಯಕತ್ವ:
ಬೊಮ್ಮಾಾಯಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ನಡೆದ ಉಪ ಚುನಾವಣೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ವರ್ಚಸ್ಸು ಕುಗ್ಗದಿರುವಂತೆ ಮುಖ್ಯಮಂತ್ರಿ ಶ್ರಮವಹಿಸಿದ್ದಾರೆ ಎಂಬ ಸಂಗತಿಯೂ ಪಕ್ಷದ ಎಲ್ಲ ಹಂತದ ನಾಯಕತ್ವಕ್ಕೂ ಸಮಾಧಾನ ತಂದಿದೆ ಎಂದೇ ಹೇಳಲಾಗುತ್ತಿದೆ. ಇದರಿಂದ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದಲ್ಲಿ ಪಕ್ಷವನ್ನು ಮುನ್ನೆಡೆಸುವ ನಾಯಕ ಯಾರು ಎಂಬ ಪ್ರಶ್ನೆಗೂ ತೆರೆಬಿದ್ದಿದೆ.
ತೆರೆ ಮರೆಯಲ್ಲಿ ಆರೋಪ ಮಾಡುವ ನಾಯಕರ ರಾಜಕೀಯ ಕಸರತ್ತುಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಸದ್ದು ಗದ್ದಲವಿಲ್ಲದೆ ಸಾಮಾನ್ಯ ಜನರ ಅತ್ಯಂತ ಅಗತ್ಯ ಬೇಡಿಕೆಗಳ ಕಡೆಗೆ ಹೆಚ್ಚು ಆದ್ಯತೆ ನೀಡಿ ಆರು ತಿಂಗಳಲ್ಲಿ ಸಾಮಾನ್ಯರ ಮುಖ್ಯಮಂತ್ರಿಯಾಗಿ ಎಲ್ಲರ ಮನದಲ್ಲಿ ಬೊಮ್ಮಾಯಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ.
ರಾಜಕೀಯವಾಗಿಯೂ ಪ್ರತಿಪಕ್ಷಗಳನ್ನು ತಮ್ಮ ನಿರ್ಧಾರಗಳಿಂದಲೇ ಕಟ್ಟಿ ಹಾಕುವ ಮೂಲಕ ರಾಜಕೀಯ ಜಾಣತನ ತೋರುತ್ತಿದ್ದಾರೆ. ಉದಾಹರಣೆಗೆ ಕಾಂಗ್ರೆಸ್ ಪಕ್ಷದ ಮೇಕೆದಾಟು ಪಾದಯಾತ್ರೆಯನ್ನು ರಾಜಕೀಯ ಜಾಣತನದಿಂದಲೇ ವಿಫಲಗೊಳಿಸಿರುವುದು ಬಿಜೆಪಿಗೆ ದೊಡ್ಡ ಪ್ಲಸ್ ಪಾಯಿಂಟ್. ಈ ರೀತಿಯ ನಿರ್ಧಾರ ಚುನಾವಣಾ ರಾಜಕೀಯಕ್ಕೆ ಪರೋಕ್ಷವಾಗಿ ದೊಡ್ಡ ಪರಿಣಾಮ ಬೀರುತ್ತವೆ. ಬೊಮ್ಮಾಯಿ ಅವರು ಅಬ್ಬರದ ಭಾಷಣ ಅಥವಾ ದೊಡ್ಡ ಧ್ವನಿಯ ಹೇಳಿಕೆಗಳಿಂದ ಮಾಸ್ ಲೀಡರ್ ಎಂಬ ಹಣೆಪಟ್ಟಿ ಕಟ್ಟಿಕೊಳ್ಳದೆ. ಸೌಮ್ಯ ಸ್ವಭಾವದಿಂದಲೇ ದಿಟ್ಟ ಹಾಗೂ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಪ್ರತಿಪಕ್ಷಗಳಿಗೂ ಸವಾಲಿನ ನಾಯಕರಾಗಿ ಪರಿಣಮಿಸುತ್ತಿದ್ದಾರೆ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಸೇರಿದಂತೆ ಹೈಕಮಾಂಡ್ ನಾಯಕರೂ ಬೊಮ್ಮಾಯಿ ನಾಯಕತ್ವದ ಮೇಲೆ ವಿಶ್ವಾಸ ಇಟ್ಟುಕೊಂಡಿರುವುದರಿಂದ ಬೊಮ್ಮಾಯಿ ಇನ್ನಷ್ಟು ಗಟ್ಟಿ ನಿರ್ಧಾರ ತೆಗೆದುಕೊಳ್ಳುವ ಭರವಸೆಯನ್ನು ತಮ್ಮ ಆರು ತಿಂಗಳ ಸಾಧನೆಯ ಭಾಷಣದಲ್ಲಿ ಮೂಡಿಸಿದ್ದಾರೆ.
ಆರು ತಿಂಗಳಲ್ಲಿ ಅನೇಕ ಸವಾಲುಗಳ ನಡುವೆಯೇ ಜನ ಮೆಚ್ಚುವ ತೀರ್ಮಾನಗಳನ್ನು ತೆಗೆದುಕೊಂಡು ಯಾವುದೇ ರಾಜಕೀಯ ಗೊಂದಲಗಳಿಲ್ಲದಿದ್ದರೆ, ಇನ್ನಷ್ಟೂ ಉತ್ತಮ ಆಡಳಿತ ಕೊಡುವ ಭರವಸೆಯನ್ನು ಕಾಮನ್ ಮ್ಯಾನ್ ಬೊಮ್ಮಾಯಿ ಮೂಡಿಸಿದ್ದಾರೆ. ಈ ನಿಟ್ಟಿನಲ್ಲಿ ಸದ್ಯದ ಬಜೆಟ್‌ ತೀವ್ರ ಕುತೂಹಲ ಮೂಡಿಸಿದೆ. ರಾಜ್ಯದ ಪ್ರಸಕ್ತ ಹಣಕಾಸು ಪರಿಸ್ಥಿತಿ ನಡುವೆಯೂ ಬಜೆಟ್‌ ಅನ್ನು ಹೇಗೆ ಮುಂದಿಡುತ್ತಾರೆ ಎಂಬುದರ ಕಡೆಗೆ ಎಲ್ಲರ ಗಮನವಿದೆ.

Leave a Reply

Your email address will not be published. Required fields are marked *