ರಾಜ್ಯಾದ್ಯಂತ ಚಿತ್ರಮಂದಿರಗಳು ಓಪನ್ : ಸದ್ಯಕ್ಕೆ ಸ್ಟಾರ್ ನಟರ ಚಿತ್ರಗಳ ಬಿಡುಗಡೆ ಇಲ್ಲ

ರಾಜ್ಯಾದ್ಯಂತ ಚಿತ್ರಮಂದಿರಗಳು ಓಪನ್ : ಸದ್ಯಕ್ಕೆ ಸ್ಟಾರ್ ನಟರ ಚಿತ್ರಗಳ ಬಿಡುಗಡೆ ಇಲ್ಲ

ಬೆಂಗಳೂರು, ಜುಲೈ 19 ರಾಜ್ಯಾದ್ಯಂತ ಚಿತ್ರಮಂದಿರಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿರುವುದು ಬಹುತೇಕ ನಿರ್ಮಾಪಕರುಗಳಿಗೆ ಸಮಾಧಾನ ತಂದಿದೆ.

ಚಿತ್ರಮಂದಿರಗಳು ತೆರೆದರೂ ಕೇವಲ ಶೇಕಡಾ 50ರಷ್ಟು ಸೀಟು ಭರ್ತಿಯೊಂದಿಗೆ ಮಾತ್ರ ಚಿತ್ರಮಂದಿರಗಳು ಕಾರ್ಯ ನಿರ್ವಹಿಸಬೇಕಿದೆ. ಮಲ್ಟಿಫ್ಲೆಕ್ಸ್‌ಗಳಿಗೂ ಇದೇ ನಿಯಮ ಅನ್ವಯವಾಗಲಿದೆ.
ರಾಜ್ಯದಲ್ಲಿ ಚಿತ್ರಮಂದಿರಗಳು ತೆರೆದಿವೆಯಾದರೂ ದೊಡ್ಡ ಬಜೆಟ್ ನ ಸಿನಿಮಾಗಳು ಸದ್ಯಕ್ಕೆ ಬಿಡುಗಡೆಯಾಗುವ ಲಕ್ಷಣಗಳಿಲ್ಲ. ಈ ಹಿಂದೆ ಲಾಕ್‌ಡೌನ್ ಆದಾಗ ಯಾವ ಸಿನಿಮಾಗಳು ಚಿತ್ರಮಂದಿರದಲ್ಲಿದ್ದವೊ ಅವು ಹಾಗೂ ಸಣ್ಣ ಬಜೆಟ್ ನ ಚಿತ್ರಗಳು ಮಾತ್ರವೇ ಮತ್ತೆ ತೆರೆಗೆ ಬರಲಿವೆ ಎನ್ನಲಾಗುತ್ತಿದೆ.
ಪ್ರೇಕ್ಷಕರಿಗೆ ಮಾಸ್ಕ್ ಕಡ್ಡಾಯವಾಗಿದೆ. ಜೊತೆಗೆ ಚಿತ್ರಮಂದಿರಗಳ ಸ್ವಚ್ಛತೆ, ಸ್ಯಾನಿಟೈಸೇಷನ್ ಇತರೆ ನಿಬಂಧನೆಗಳನ್ನು ಸರ್ಕಾರವು ಚಿತ್ರಮಂದಿರಗಳ ಮೇಲೆ ಹೇರಿದೆ. ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಇದು ಅಗತ್ಯವೂ ಆಗಿದೆ.
ಚಿತ್ರಮಂದಿರಗಳು ಪೂರ್ಣ ಪ್ರಮಾಣದಲ್ಲಿ ತೆರೆಯುವವರೆಗೆ ಸ್ಟಾರ್ ನಟರ ಚಿತ್ರಗಳು ತೆರೆಗೆ ಬರುವುದಿಲ್ಲ. ಶಿವರಾಜ್ ಕುಮಾರ್ ನಟನೆಯ ‘ಭಜರಂಗಿ 3’, ಯಶ್ ನಟನೆಯ ‘ಕೆಜಿಎಫ್ 2’, ಸುದೀಪ್ ನಟನೆಯ ‘ಕೋಟಿಗೊಬ್ಬ 3’, ದುನಿಯಾ ವಿಜಯ್‌ರ ‘ಸಲಗ’, ರಕ್ಷಿತ್ ಶೆಟ್ಟಿಯ ‘777’ ಇನ್ನೂ ಹಲವಾರು ಕನ್ನಡ ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ.
ನೆರೆಯ ಆಂಧ್ರ, ತಮಿಳುನಾಡು ರಾಜ್ಯಗಳಲ್ಲಿ ಸಹ ಚಿತ್ರಮಂದಿರಗಳನ್ನು ತೆರೆಯಲು ಅಲ್ಲಿನ ಸರ್ಕಾರಗಳು ಅನುಮತಿ ನೀಡಿವೆ. ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಚಿತ್ರಮಂದಿರಗಳು ಇನ್ನೂ ತೆರೆದಿಲ್ಲ.

, , , ,

Leave a Reply

Your email address will not be published. Required fields are marked *