ವಾರ್ಧಾ/ಮಹಾರಾಷ್ಟ್ರ,ಜ.25, ಉದಯಕಾಲ: ಮಹಾರಾಷ್ಟ್ರದಿಂದ ಬೆಳ್ಳಂಬೆಳಗ್ಗೆ ಅತ್ಯಂತ ನೋವಿನ ಸುದ್ದಿಯೊಂದು ಬೆಳಕಿಗೆ ಬಂದಿದೆ. ಸೇತುವೆಯ ಮೇಲಿಂದ ಕಾರು ಬಿದ್ದು 7 ವೈದ್ಯಕೀಯ ವಿದ್ಯಾರ್ಥಿಗಳು ದಾರುಣವಾಗಿ ಸಾವಿಗೀಡಾಗಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಎಲ್ಲ ವೈದ್ಯಕೀಯ ವಿದ್ಯಾರ್ಥಿಗಳು ದಾವೇಲಿಯಿಂದ ಮಹಾರಾಷ್ಟ್ರದ ವಾರ್ಧಾ ಜಿಲ್ಲೆಗೆ ತೆರಳುತ್ತಿದ್ದರು ಎಂಬುದು ತಿಳಿದುಬಂದಿದೆ.
ನದಿಯ ಸೇತುವೆ ಮೇಲೆ ವಾಹನ ಸಾಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕೆಳಗೆ ಉರುಳಿದೆ. ಕಾರಿನಲ್ಲಿದ್ದ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ವಾಹನ ಸಂಪೂರ್ಣ ಜಖಂಗೊಂಡಿದ್ದು, ರಾತ್ರಿ ಆಗಿದ್ದರಿಂದ ಅಪಘಾತ ನಡೆದ ಬಗ್ಗೆ ವರದಿಯಾಗಿಲ್ಲ. ಆದರೆ, ಭಾರೀ ಶಬ್ಧದ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ಕಾರು ಬಿದ್ದಿರುವುದು ಕೇಳಿದೆ. ಆದರೆ, ಆ ವೇಳೆಗಾಗಲೇ ಯುವಕರನ್ನು ರಕ್ಷಿಸುವ ಸಾಧ್ಯತೆ ಕಡಿಮೆಯಾಗಿತ್ತು.
ಸದ್ಯ ವಾರ್ಧಾದ ಸೆಲ್ಸೂರದಲ್ಲಿ ನಡೆದ ಘಟನೆ ಸಂಚಲನ ಮೂಡಿಸಿದ್ದು, ಅಪಘಾತದಲ್ಲಿ ಮೃತಪಟ್ಟವರಲ್ಲಿ ಶಾಸಕರೊಬ್ಬರ ಪುತ್ರನೂ ಸೇರಿದ್ದಾನೆ ಎನ್ನಲಾಗುತ್ತಿದೆ. ಮೃತರನ್ನು ದತ್ತಾ ಮೇಘೆ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ. ಸ್ಥಳೀಯ ಗ್ರಾಮಸ್ಥರು ಮತ್ತು ಸಾಮಾಜಿಕ ಕಾರ್ಯಕರ್ತರ ಸಹಾಯದಿಂದ ಯುವಕರ ಶವಗಳನ್ನು ಹೊರತೆಗೆಯಲಾಗಿದೆ. ಕಾರು ಅಪಘಾತಕ್ಕೆ ಒಳಗಾದ ವೈದ್ಯಕೀಯ ವಿದ್ಯಾರ್ಥಿಗಳ ಗುರುತು ಇನ್ನೂ ಪತ್ತೆಯಾಗಿಲ್ಲ.