ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ: ಮುಖ್ಯಮಂತ್ರಿ ವಿರುದ್ಧ ಬಹಿರಂಗ ಆಕ್ರೋಶ

ಬೆಂಗಳೂರು, ಜ 13 (ಯುಎನ್ಐ) ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಅವಕಾಶ ವಂಚಿತರು ನಾಯಕತ್ವವನ್ನು ಬಹಿರಂಗವಾಗಿ ಪ್ರಶ್ನಿಸಿದ್ದು, ಶಿಸ್ತಿನ ಪಕ್ಷ ಬಿಜೆಪಿಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ, ಇದು ಬಂಡಾಯದ ಸ್ವರೂಪ ಪಡೆಯುವ ಲಕ್ಷಣಗಳು ಕಾಣಿಸಿಕೊಂಡಿವೆ.

ಹಣ ಮತ್ತು ಬ್ಲಾಕ್ ಮೇಲ್ ಗೆ ಮಣಿದು ಮುಖ್ಯಮಂತ್ರಿ ಯಡಿಯೂರಪ್ಪ ಮೂವರಿಗೆ ಸಚಿವ ಸ್ಥಾನ ನೀಡಿದ್ದು, ಇವರ ನಾಯಕತ್ವದ ಅಂತ್ಯ ಆರಂಭವಾಗಿದೆ ಎಂದು ಕೇಂದ್ರದ ಮಾಜಿ ಸಚಿವ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದಾರೆ.

ಮತ್ತೊಂದೆಡೆ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದವರನ್ನು ಬಿಟ್ಟು ಮೆಗಾಸಿಟಿ ವಸತಿ ಯೋಜನೆಯಲ್ಲಿ ಲಕ್ಷಾಂತರ ಮಂದಿಗೆ ವಂಚಿಸಿರುವ ಸಿ.ಪಿ. ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡಿರುವ ಕ್ರಮವನ್ನು ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ನೇರವಾಗಿ ಪ್ರಶ್ನಿಸಿದ್ದಾರೆ.

ಈ ಬಾರಿ ಸಚಿವರಾಗುವ ನಿರೀಕ್ಷೆ ಹೊಂದಿದ್ದ ಆರ್.ಆರ್. ನಗರ ಕ್ಷೇತ್ರದ ಶಾಸಕ ಮುನಿರತ್ನ ಈ ಬೆಳವಣಿಗೆ ಬಗ್ಗೆ ತಮ್ಮ ಬೆಂಬಲಿಗರಲ್ಲಿ ಅಸಮಾಧಾನ ವ್ಯಕ್ತಮಾಡಿದ್ದಾರೆ. ಆದರೆ ಬಹಿರಂಗವಾಗಿ ಹೇಳಿಕೆ ನೀಡಿಲ್ಲ. ಮಾರ್ಚ್ ನಲ್ಲಿ ನಡೆಯಲಿರುವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ತಮಗೆ ಅವಕಾಶ ನೀಡುವುದಾಗಿ ಯಡಿಯೂರಪ್ಪ ಮುನಿರತ್ನ ಅವರನ್ನು ಸಮಾಧಾನಪಡಿಸಿದ್ದಾರೆ ಎನ್ನಲಾಗಿದೆ.

ಸಂಭಾವಿತ ಶಾಸಕ ಎಂದೇ ಹೆಸರಾಗಿದ್ದ ಚಂದ್ರಕಾಂತ್ ಬೆಲ್ಲದ್ ಅವರ ಪುತ್ರ ಅರವಿಂದ ಬೆಲ್ಲದ್ ಸಹ ರಾಜಭವನದ ಮುಂದೆಯೇ ಮುಖ್ಯಮಂತ್ರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ತಮ್ಮ ತಂದೆ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಮಾತುಕೊಟ್ಟಿದ್ದರು. ಆದರೆ ಈಡೇರಿಸಲಿಲ್ಲ. ಈಗ ನನಗೂ ಅವಕಾಶ ಕಲ್ಪಿಸಿಲ್ಲ. ಇದರಿಂದ ತಮಗೆ ಅತೀವ ಬೇಸರವಾಗಿದೆ. ನೇರವಾಗಿ ಆಯ್ಕೆಯಾದ ಶಾಸಕರಿಗೆ ಸಚಿವ ಸ್ಥಾನ ನೀಡುವುದನ್ನು ಬಿಟ್ಟು ವಿಧಾನಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡಿದ ಔಚಿತ್ಯವೇನು ಎಂದು ಪ್ರಶ್ನಿಸಿದರು.

ಈ ಬೆಳವಣಿಗೆಯಿಂದ ನೋವಾಗಿದೆ. ಶೀಘ್ರದಲ್ಲೇ ದೆಹಲಿಗೆ ತೆರಳಿ ಪಕ್ಷದ ವರಿಷ್ಠರಿಗೆ ದೂರು ನೀಡುವುದಾಗಿಯೂ ಅರವಿಂದ ಬೆಲ್ಲದ್ ಎಚ್ಚರಿಕೆ ನೀಡಿದ್ದಾರೆ.

ಶಾಸಕ ಎಂ.ಸತೀಶ್ ರೆಡ್ಡಿ ಟ್ವೀಟ್ ಮಾಡಿ, ಯಡಿಯೂರಪ್ಪನವರೇ ಮಂತ್ರಿಮಂಡಲ ವಿಸ್ತರಣೆಯಲ್ಲಿ ಸಚಿವರ ಆಯ್ಕೆ ಪ್ರಕ್ರಿಯೆಯ ಮಾನದಂಡಗಳೇನು? ನಿಮಗೆ, ನಮ್ಮ ರಾಜ್ಯ ಮತ್ತು ರಾಷ್ಟ್ರದ ನಾಯಕರುಗಳಿಗೆ ನಿಷ್ಟಾವಂತ ಯುವ ಕಾರ್ಯಕರ್ತರು ಕಾಣುತ್ತಿಲ್ಲವೆ? ನಮ್ಮ ಕಷ್ಟ ನಷ್ಟಗಳನ್ನು ಆಲಿಸುತ್ತಿದ್ದ ಅನಂತಕುಮಾರ್ ಜಿ ರವರ ಇಲ್ಲದಿರುವಿಕೆ ಎದ್ದು ಕಾಣುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಸಕರಾದ ತಿಪ್ಪಾರೆಡ್ಡಿ, ಎಂ.ಪಿ. ರೇಣುಕಾಚಾರ್ಯ, ಮೂಡಿಗೆರೆ ಎಂ.ಪಿ. ಕುಮಾರಸ್ವಾಮಿ, ಶಿವನಗೌಡ ನಾಯಕ್, ನೆಹರು ಓಲೆಕಾರ್ ಕೂಡಾ ತಮ್ಮ ಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಚಿವ ಎಚ್.ನಾಗೇಶ್ ಅವರಿಗೆ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಸೂಚಿಸಿದ್ದು, ಇದರಿಂದ ನಾಗೇಶ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ರಾಜೀನಾಮೆ ನೀಡುವಂತೆ ನಾಗೇಶ್ ಅವರಿಗೆ ಸೂಚಿಸಿದರು. ಬಳಿಕ ಮಾತನಾಡಿದ ಯಡಿಯೂರಪ್ಪ ನಾಗೇಶ್ ಅವರನ್ನು ಸಮಾಧಾನ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಅವರಿಗೆ ಸೂಕ್ತ ರೀತಿಯಲ್ಲಿ ಸ್ಥಾನಮಾನ ಕಲ್ಪಿಸುವುದಾಗಿ ಹೇಳಿದರು.

Leave a Reply

Your email address will not be published. Required fields are marked *