ಅರಣ್ಯವಾಸಿಗಳ ಉತ್ಪನ್ನಕ್ಕೆ ಜಾಗತಿಕ ಬೇಡಿಕೆ

ಮಧ್ಯ ಭಾರತ ಅಪಾರವಾದ ಖನಿಜ, ಲೋಹಗಳು, ಕಲ್ಲಿದ್ದಲು ಇತ್ಯಾದಿಯನ್ನು ನೆಲದಾಳ ದಲ್ಲಿ ಅಡಗಿಸಿಕೊಂಡ ಭೂಭಾಗ. ಪ್ರಾಕೃತಿಕ ಸಂಪನ್ಮೂಲದ ಭಂಡಾರವಾ ದರೂ, ಇಲ್ಲಿನ ಅರಣ್ಯ ವಾಸಿಗಳಿಗೆ ಬಡತನ ತಪ್ಪಿದ್ದಲ್ಲ. ಅರಣ್ಯ ಹಕ್ಕುಗಳ ಕಾಯಿದೆ(ಎಫ್‌ಆರ್‌ಎ) ಜಾರಿಗೆ ಬಂದ ಬಳಿಕ ಅರಣ್ಯವಾಸಿ ಗಳಿಗೆ ಸ್ವಾಭಾವಿಕ ಸಂಪನ್ಮೂಲದ ಮೇಲೆ ಸ್ವಲ್ಪ ಮಟ್ಟಿನ ಹಕ್ಕು ಲಭ್ಯವಾಗಿದೆ. ಇಲ್ಲಿನ ಅರಣ್ಯ ಉತ್ಪನ್ನಗಳು ಜಗತ್ಪ್ರಸಿದ್ಧ ಬ್ರಾಂಡ್‌ಗಳಲ್ಲಿ ಬಳಕೆ ಯಾಗು ತ್ತಿದ್ದು, ಆದಾಯದ ಸಣ್ಣ ಪಾಲು ಸ್ಥಳೀಯರಿಗೆ ಸಂದಾಯವಾಗುತ್ತಿದೆ.

ಜಾರ್ಖಂಡ, ಒಡಿಶಾ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶ ರಾಜ್ಯಗಳು ಅಪಾರ ಪ್ರಾಕೃತಿಕ ಸಂಪತ್ತನ್ನು ಒಳಗೊಂಡಿವೆ. ಚತ್ತೀಸ್‌ಗಢದ ಸ್ಥಳೀಯ ಸಂಸ್ಥೆ, ಮನೋರಮಾ ಇಂಡ ಸ್ಟ್ರೀಸ್, ಎಸ್‌ಎಂಇ ವಿಭಾಗದಲ್ಲಿ ಇತ್ತೀಚೆಗೆ ಸ್ಟಾಕ್ ವಿನಿಮಯ ಕೇಂದ್ರದಲ್ಲಿ ನಮೂದು ಗೊಂಡಿದೆ. ಈ ಕಾರ್ಖಾನೆಯ ಉತ್ಪನ್ನ ಕೋಕೋ ಬಟರ್ ಈಕ್ವಿವಲೆಂಟ್(ಕೋಕೋ ಬೆಣ್ಣೆಯ ಸಮಾನ ಉತ್ಪನ್ನ, ಸಿಬಿಇ) ಹಲವು ಬಹುರಾಷ್ಟ್ರೀಯ ಕಂಪನಿಗಳ ಸೌಂದರ್ಯ ವರ್ಧನ ಉತ್ಪನ್ನಗಳು ಹಾಗೂ ಚಾಕೋಲೆಟ್‌ನಲ್ಲಿ ಬಳಸಲ್ಪಡುತ್ತದೆ.

ಸಿಬಿಇ ಎಂದರೆ ಏನು?: ಸಿಬಿಇ ಕೊಬ್ಬನ್ನು ಹೋಲುವ ವಸ್ತು. ದುಬಾರಿಯಾದ ಕೋಕೋ ಸಾರದ ಗುಣಗಳನ್ನು ಒಳಗೊಂಡಿದ್ದು, ಅದರ ಬದಲು ಬಳಸ ಬಹುದು. ಸ್ವಲ್ಪ ಪ್ರಮಾಣದ ಕೋಕೋ ಸಾರದ ಜೊತೆಗೆ ಇದನ್ನು ಹೆಚ್ಚು ಪ್ರಮಾಣದಲ್ಲಿ ಮಿಶ್ರಗೊಳಿಸಿ ಬಳಸಬಹುದು. ಇದರಿಂದ ಕೋಕೋ ಸಾರದ ಒಟ್ಟಾರೆ ಗುಣವಿಶೇಷ ಬದಲಾಗುವುದಿಲ್ಲ. ಬೆಲೆ ಕೋಕೋ ಸಾರದ ಅರ್ಧದಷ್ಟು ಇದೆ. ಹೀಗಾಗಿ ಇದನ್ನು ಚಾಕೊಲೇಟ್-ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

ಮನೋರಮಾ ಉತ್ಪಾದಿಸುವ ಸಿಬಿಇಯನ್ನು ಸಾಲ್, ಮಾವು, ಕೋಕಂ, ಮಹುವಾ, ಧೂಪ ಇನ್ನಿತರ ಮರಗಳಿಂದ ತೆಗೆದ ದ್ರವದಿಂದ ಉತ್ಪಾದಿಸ ಲಾಗುತ್ತದೆ. ಈ ರಾಜ್ಯಗಳ ಲಕ್ಷಾಂತರ ಆದಿವಾಸಿಗಳ ಸಂಪರ್ಕಜಾಲವನ್ನು ಕಂಪನಿ ಹೊಂದಿದ್ದು, ಅವರು ಮರಗಳಿಂದ ಸಾರವನ್ನು ಸಂಗ್ರಹಿಸಿ ಕಳಿಸುತ್ತಾರೆ.

ಕಂಪನಿ ಪ್ರಕಾರ, ಇಂಥ 60 ಲಕ್ಷ ಅರಣ್ಯವಾಸಿಗಳು ಇದ್ದಾರೆ. ಇದರಲ್ಲಿ ಹೆಚ್ಚಿನವರು ಮಹಿಳೆಯರು. ಕಂಪನಿಗೆ ಕಚ್ಚಾ ಸರಕು ಪೂರೈಸುವ ಆದಿವಾಸಿ ಮಹಿಳೆಯರಿಗೆ ಗೌರವಯುತ ಬದುಕು ಸಾಧ್ಯವಾಗಿದೆ. ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯದ ಕನಸು ಕಾಣುವುದು ಸಾಧ್ಯವಾಗಿದೆ ಎನ್ನುತ್ತಾರೆ ಕಂಪನಿ ಯ ಅಧ್ಯಕ್ಷ ಆಶಿಶ್ ಸರಾಫ್. ಇವರ ಮುತ್ತಜ್ಜ 1940ರಲ್ಲಿ ಕಂಪನಿಯನ್ನು ಆರಂಭಿಸಿದ್ದರು.

ಸಂಗ್ರಹ ಕೇಂದ್ರಗಳು: ಕಂಪನಿಯು 18,000 ಸಂಗ್ರಹ ಕೇಂದ್ರಗಳನ್ನು ಆರಂಭಿಸಿದೆ ಹಾಗೂ ಸಾಲ್ ಮರಕ್ಕೆ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ)ಯನ್ನು ಸರ್ಕಾರದಿಂದ ದೊರಕಿಸಿಕೊಡುವಲ್ಲಿ ಯಶ ಕಂಡಿದೆ. ದೇಶದ ಒಟ್ಟು ಅರಣ್ಯ ಪ್ರದೇಶದಲ್ಲಿ ಸಾಲ್ ಮರಗಳ ಪಾಲು ಶೇ.14. ಇಷ್ಟಲ್ಲದೆ, ಕಂಪನಿಯು ಸ್ಥಳೀಯರಿಗಾಗಿ ಹಲವು ಯೋಗಕ್ಷೇಮ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ.

ಬಹುರಾಷ್ಟ್ರೀಯ ಕಂಪನಿಗಳ ಪ್ರತಿನಿಧಿಗಳನ್ನು ಕಾಡಿಗೆ ಕರೆದೊಯ್ದು ಜನಜೀವನದ ಅರಿವು ಮೂಡಿಸಲಾಗುತ್ತದೆ. ಬದಿಗೊತ್ತಲ್ಪಟ್ಟ ಸ್ಥಳೀಯರನ್ನು ಮೇಲೆತ್ತಲು ಕೆಲವು ಕಂಪನಿಗಳು ನಾನಾ ರೂಪದಲ್ಲಿ ನೆರವಾಗಿವೆ.  ಕಂಪನಿ ಕಚ್ಚಾ ಸರಕಿನ ಸಂಗ್ರಹ ಹಾಗೂ ಸಂಸ್ಕರಣೆಯಲ್ಲಿ ಪರಿಸರಸ್ನೇಹಿ ತಂತ್ರವನ್ನು ಬಳಸಿಕೊಳ್ಳುತ್ತಿದೆ. ಕಾಡಿನ ನೆಲದಲ್ಲಿ ಬಿದ್ದ ಹಣ್ಣು-ಬೀಜವನ್ನು ಆದಿವಾಸಿಗಳು ಕೈಯಿಂದಲೇ ಸಂಗ್ರಹಿಸುತ್ತಾರೆ. ತಿರುಳಿನ ಸಂಗ್ರಹಕ್ಕೆ ಸಾಂಪ್ರದಾಯಿಕ ದಹನ ಹಾಗೂ ತೊಗಟೆ ಕೆತ್ತುವ ವಿಧಾನ ಬಳಸಲಾಗುತ್ತದೆ.

ಅರಣ್ಯವಾಸಿಗಳು ಸಂಗ್ರಹಿಸುವ ಉತ್ಪನ್ನಗಳಿಂದ ತಯಾರಿಸಿದ ಸಿಬಿಇ, ಜಗತ್ತಿನೆಲ್ಲೆಡೆಯ ಗ್ರಾಹಕರನ್ನು ತಲುಪುತ್ತಿದೆ. ಕಂಪನಿಯ ಶೇ.60ರಷ್ಟು ಆದಾಯ ರಫ್ತಿನಿಂದ ಬರುತ್ತದೆ. ಕಂಪನಿಯ ಗ್ರಾಹಕರ ಪಟ್ಟಿಯಲ್ಲಿ ಜಗತ್ಪ್ರಸಿದ್ಧ ಶೃಂಗಾರ ಸಾಧನ ಉತ್ಪಾದನೆ ಕಂಪನಿಗಳಾದ ಬಾಡಿ ಶಾಪ್, ಲೋರಿಯಲ್ ಹಾಗೂ ಚಾಕೋಲೇಟ್ ಉತ್ಪಾದಕರಾದ ಫೆರ್ರೆರೋ ರೋಶರ್ ಇನ್ನಿತರ ಕಂಪನಿಗಳಿವೆ.

ಮನೋರಮಾ ತನ್ನ ಸಂಸ್ಕರಣೆ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಈಗಾಗಲೇ ಮೂರು ಘಟಕಗಳಿದ್ದರೂ, ಬೇಡಿಕೆಯನ್ನು ಪೂರೈಸಲು ಆಗುತ್ತಿಲ್ಲ ಎನ್ನುತ್ತಾರೆ ಸರಾಫ್.

Leave a Reply

Your email address will not be published. Required fields are marked *