ಅಂಕುಶ್ ರಘುವಂಶಿ ಟೀಂ ಇಂಡಿಯಾದ ಉದಯೋನ್ಮುಖ ತಾರೆ!

ಹೊಸದಿಲ್ಲಿ: ಜನೆವರಿ 23 (ಉದಯಕಾಲ) ಅಂಡರ್ 19 ವರ್ಲ್ಡ್ ಕಪ್ ಮೂಲಕ ಭಾರತ ಕ್ರಿಕೆಟ್ ತಂಡಕ್ಕೆ ಮತ್ತೊಬ್ಬ ಉದಯೋನ್ಮುಖ ಆಟಗಾರ ದೊರೆತಿದ್ದಾರೆ. ಅವರೇ ದೆಹಲಿ ಮೂಲದ ಅಂಕುಶ್ ರಘವಂಶಿ. ಇತ್ತೀಚೆಗೆ ನಡೆಯುತ್ತಿರುವ ಐಸಿಸಿ ಅಂಡರ್ -19 ವರ್ಲ್ಡ್ ಕಪ್ ನಲ್ಲಿ ಐರ್ಲೆಂಡ್ ವಿರುದ್ಧ ಅರ್ಧಶತಕ, ಉಗಾಂಡಾ ವಿರುದ್ಧ ಶತಕ ಬಾರಿಸುವ ಮೂಲಕ ಮುಂದಿನ ಕ್ರಿಕೆಟ್ ತಾರೆ ಎಂದೇ ಬಿಂಬಿತವಾಗುತ್ತಿದ್ದಾರೆ. ಇದುವರೆಗೆ ನಡೆದ ವಿಶ್ವಕಪ್ ನಲ್ಲಿ ರಘುವಂಶಿ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ಮಾಡಿದ್ದಾರೆ.

ಅಂಡರ್-19 ವಿಶ್ವಕಪ್‌ನಲ್ಲಿ ಉಗಾಂಡ ವಿರುದ್ಧ ಟೀಂ ಇಂಡಿಯಾ 326 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಟೀಂ ಇಂಡಿಯಾದ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಅಂಕುಶ್ ರಘುವಂಶಿ 144 ರನ್ ಗಳಿಸಿದ್ದಾರೆ. ಇದಲ್ಲದೇ, ಶ್ರೀಲಂಕಾ ವಿರುದ್ಧದ ಏಷ್ಯಾಕಪ್ ಫೈನಲ್‌ನಲ್ಲಿ 56 ರನ್ ಗಳಿಸಿ ತಂಡವನ್ನು ಗೆಲ್ಲಿಸಿ ಕೊಟ್ಟಿದ್ದರು. ಅಂಕುಶ್ ರಘುವಂಶಿಗೆ ಸದ್ಯ 16 ವರ್ಷ. 5 ಜೂನ್ 2005ರಂದು ದೆಹಲಿಯಲ್ಲಿ ಜನಿಸಿದ್ದಾರೆ.

ಓಪನರ್ ಅಂಕುಶ್ ರಘುವಂಶಿ ಪೋಷಕರೂ ಸಹ ಕ್ರೀಡಾ ಹಿನ್ನೆಲೆ ಹೊಂದಿದ್ದಾರೆ. ಅಂಕುಶ್ ತಾಯಿ ಮಲಿಕಾ ಭಾರತ ತಂಡದ ಪರ ಬ್ಯಾಸ್ಕೆಟ್‌ ಬಾಲ್ ಆಡಿದ್ದಾರೆ ಮತ್ತು ತಂದೆ ಅವನೀಶ್ ರಘುವಂಶಿ ಟೆನಿಸ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಗುರ್‌ಗಾಂವ್‌ನಲ್ಲಿ ಆರಂಭಿಕ ತರಬೇತಿ ಪಡೆದ ಅಂಕುಶ್, ಏನಾದ್ರೂ ಸಾಧಿಸಬೇಕು ಹಾಗೂ ಉತ್ತಮ ಕ್ರಿಕೆಟಿಗನಾಗುವ ಕನಸಿನೊಂದಿಗೆ ಕೋಚಿಂಗ್‌ಗಾಗಿ 10ನೇ ವಯಸ್ಸಿನಲ್ಲಿ ಮುಂಬೈನತ್ತ ಹೊರಟರು.

10ನೇ ವಯಸ್ಸಿನಲ್ಲಿ ದೆಹಲಿಯಿಂದ ಮುಂಬೈಗೆ ಬಂದ ನಂತರ ಅಂಕುಶ್ ಗೆ ಅಭಿಷೇಕ್ ನಾಯರ್ ಎಂಬವರು ತಮ್ಮ ಮನೆಯಲ್ಲಿಯೇ ತರಬೇತಿ ನೀಡಿದರು. ಬಲಗೈ ಬ್ಯಾಟ್ಸ್‌ಮನ್ ಅಂಕುಶ್ ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ತಂಡಕ್ಕಾಗಿ ಸತತ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಐರ್ಲೆಂಡ್ ವಿರುದ್ಧ 79 ರನ್ ಮತ್ತು ಉಗಾಂಡಾ ವಿರುದ್ಧ 144 ರನ್ ಗಳಿಸಿದ್ದಾರೆ. ಇಲ್ಲಿಯವರೆಗೆ ಅಂಕುಶ್ 7 ಅಂಡರ್-19 ಒಡಿಐಗಳಲ್ಲಿ 55.83 ಸರಾಸರಿಯಲ್ಲಿ 335 ರನ್ ಗಳಿಸಿದ್ದಾರೆ.

ಐಸಿಸಿ ಅಂಡರ್ – 19 ವಿಶ್ವಕಪ್ ನಲ್ಲಿ ಭಾರತ ತಂಡ ಗ್ರೂಪ್ ಸುತ್ತಿನ ಎಲ್ಲ ಪಂದ್ಯಗಳನ್ನು ಗೆಲ್ಲುವ ಮೂಲಕ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಭಾರತ ತಂಡ ಜನವರಿ 29ರಂದು ಬಾಂಗ್ಲಾದೇಶ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯವನ್ನು ಆಡಬೇಕಾಗಿದೆ. ಆಂಟಿಗುವಾದ ಕೂಲಿಡ್ಜ್ ಕ್ರಿಕೆಟ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ. ಕಳೆದ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ಎದುರು ಭಾರತ ಫೈನಲ್‌ನಲ್ಲಿ ಸೋಲನುಭವಿಸಿತ್ತು. ಅಂಕುಶ್ ರಘುವಂಶಿ ಮುಂಬರುವ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಇದೆ.

Leave a Reply

Your email address will not be published. Required fields are marked *