ಬೀಜ ನಿಗಮವನ್ನು ಮಾದರಿ ನಿಗಮವನ್ನಾಗಿಸಲು ಪ್ರಯತ್ನ; ಬಿ.ಸಿ.ಪಾಟೀಲ್

ಬೀಜ ನಿಗಮವನ್ನು ಮಾದರಿ ನಿಗಮವನ್ನಾಗಿಸಲು ಪ್ರಯತ್ನ; ಬಿ.ಸಿ.ಪಾಟೀಲ್

ಬೆಂಗಳೂರು,ಜ.14 ರಾಜ್ಯ ಬೀಜ‌ ನಿಗಮವನ್ನು ಇಡೀ ದೇಶದಲ್ಲಿ ಮಾದರಿ ಬೀಜ ನಿಗಮವನ್ನಾಗಿ ಮಾಡಲು ದೃಢ ಸಂಕಲ್ಪ ಹೊಂದಿದ್ದು, ನಿಗಮವನ್ನು ಬಲಪಡಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಕೃಷಿ ಸಚಿವರೂ ಆಗಿರುವ ರಾಜ್ಯ ಬೀಜ ನಿಗಮದ ಅಧ್ಯಕ್ಷ ಬಿ‌.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಮೊದಲ ಬಾರಿಗೆ ಬೀಜ ನಿಗಮಕ್ಕೆ ಚುನಾಯಿತ ಪ್ರತಿನಿಧಿಯೊಬ್ಬರು ಅಧ್ಯಕ್ಷರಾಗಿದ್ದಾರೆ.
ಕೃಷಿಕ ಕುಟುಂಬದಿಂದ ಬಂದಿರುವ ಬಿ.ಸಿ.ಪಾಟೀಲ್, ರಾಜ್ಯ ಬೀಜ ನಿಗಮಕ್ಕೆ ಅಧ್ಯಕ್ಷರಾಗಿದ್ದು, ಗುರುವಾರ ಬೀಜ ನಿಗಮದ ಅಧ್ಯಕ್ಷರಾಗಿ ಪದಗ್ರಹಣ ಮಾಡಿದರು.
ಅಧಿಕಾರ ಸ್ವೀಕರಿಸಿ ಮೊದಲ ಬಾರಿಗೆ ರಾಜ್ಯ ಬೀಜ ನಿಗಮದ ಇಲ್ಲಿಯವರೆಗಿನ ಸಾಧನೆ, ಮುಂದಿರುವ ಯೋಜನೆಗಳು, ಬೀಜ ಉತ್ಪಾದನೆ, ಕೈಗೊಂಡಿರುವ ಕ್ರಮಗಳು ಸೇರಿದಂತೆ ಸಮಗ್ರವಾಗಿ ಬೀಜ ನಿಗಮದ ಅಧಿಕಾರಿ ಸಿಬ್ಬಂದಿ ವರ್ಗದ ಜೊತೆ ಬೆಂಗಳೂರಿನಲ್ಲಿ ಸಭೆ ನಡೆಸಿ ಚರ್ಚಿಸಿದರು.
ರಾಜ್ಯ ಬೀಜ ನಿಗಮದ ಉತ್ಪಾದನೆ‌ ಎಷ್ಟಿದೆ? ಯಾವ್ಯಾವ ಬೀಜಗಳು ನಿಗಮದಿಂದ ಉತ್ಪಾದನೆಯಾಗುತ್ತಿವೆ?ಎಷ್ಟು ಜನ ಬೀಜಗಳನ್ನು ಉತ್ಪಾದಿಸುತ್ತಿದ್ದಾರೆ?
ಪ್ರಮಾಣಿತ ಬೀಜಗಳ ಮಾಹಿತಿ, ರೈತರಿಗೆ ಅವುಗಳನ್ನು ತಲುಪಿಸುವ ಬಗೆ ಕುರಿತು ಅಧಿಕಾರಿಗಳ ಜೊತೆ ಬಿ.ಸಿ.ಪಾಟೀಲ್ ಚರ್ಚಿಸಿದರು.
ಪ್ರಮಾಣಿತ ಬೀಜಗಳನ್ನೇ ಉತ್ಪಾದಿಸಬೇಕು ಹಾಗೂ ರೈತರಿಗೆ ಯಾವುದೇ ತೊಂದರೆಯಾಗದಂತೆ ಅವುಗಳನ್ನು ಪೂರೈಸಬೇಕು. ಕಳಪೆ ಬಿತ್ತನೆ ಬೀಜ ಮಾರಾಟಗಾರರ ಮೇಲೆ ನಿಗಾ ಇಟ್ಟಿರಬೇಕು ಎಂದು ಅಧಿಕಾರಿಗಳಿಗೆ ಕೃಷಿ ಸಚಿವರು ಸೂಚಿಸಿದರು.
ಬೀಜ ನಿಗಮ ಅಭಿವೃದ್ಧಿಯಾಗಲು ಹಾಗೂ ರೈತರಿಗೆ ಸಾಧ್ಯವಾದಷ್ಟು ಅನುಕೂಲ ಕಲ್ಪಿಸಲು ರಾಜ್ಯದಲ್ಲಿ ಸಾಕಷ್ಟು ಅವಕಾಶಗಳಿದ್ದು, ಇರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ರಾಜ್ಯ ಬೀಜ ನಿಗಮವನ್ನು ಇಡೀ ದೇಶದಲ್ಲಿಯೇ ಮಾದರಿ ನಿಗಮವನ್ನಾಗಿ ಮಾಡಲು ಎಲ್ಲರೂ ಕಟಿಬದ್ಧರಾಗಿ ದೃಢ ಸಂಕಲ್ಪ ಹೊಂದಬೇಕೆಂದು ಬಿ.ಸಿ.ಪಾಟೀಲ್ ಕರೆ ನೀಡಿದರು.
ಸಭೆಯಲ್ಲಿ ಬೀಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಮಣರೆಡ್ಡಿ, ಕೃಷಿ ಸಚಿವರ ಆಪ್ತ ಕಾರ್ಯದರ್ಶಿ ಸಿ.ಎಲ್, ಶಿವಕುಮಾರ್, ಕೃಷಿ ಇಲಾಖೆಯ ವಿಶೇಷ ಕರ್ತವ್ಯಾಧಿಕಾರಿ ಮಂಜು, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಎ.ಬಿ.ಪಾಟೀಲ್ ಸೇರಿದಂತೆ ಮಾರುಕಟ್ಟೆ ಹಾಗೂ ಉತ್ಪಾದನೆ ವಿಭಾಗದ ಅಧಿಕಾರಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *