ತಕ್ಷಣವೇ ವಾಹನಗಳಿಗೆ ಇಂಧನ ಭರ್ತಿ ಮಾಡಿಕೊಳ್ಳಿ

ಬೆಂಗಳೂರು: ಮೇ 26 (ಉದಯಕಾಲ ನ್ಯೂಸ್) ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಪೆಟ್ರೋಲಿಯಂ ಮಾರಾಟಗಾರರ ಒಕ್ಕೂಟವು ಇದೇ 31ರ ನಂತರ ಡಿಪೋಗಳಿಂದ ತೈಲ ಖರೀದಿಸದೆ ಪ್ರತಿಭಟನೆ ನಡೆಸಲು ಮುಂದಾಗಿದೆ. ಪರಿಣಾಮ ವಾಹನಗಳಿಗೆ ಬಂಕ್‍ಗಳಲ್ಲಿ ಇಂಧನ ಸಿಗದೆ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ.

2017ರಿಂದ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲೆ 1ರೂ. ಕಮಿಷನ್ ನೀಡಬೇಕೆಂಬುದು ಫೆಡರೇಷನ್‍ನ ಪ್ರಮುಖ ಬೇಡಿಕೆಯಾಗಿತ್ತು. ಅಂದಿನಿಂದ ಇಂದಿನವರೆಗೂ ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ. ಹೀಗಾಗಿ ಅನ್ಯ ಮಾರ್ಗವಿಲ್ಲದೆ ನಾವು ತೈಲ ಡಿಪೋಗಳಿಂದ ಇಂಧನ ಖರೀದಿ ಮಾಡದೆ ಪ್ರತಿಭಟನೆ ಮಾಡುತ್ತೇವೆ ಎಂದು ಫೆಡರೇಷನ್ ಪ್ರಮುಖ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ

2017ರಲ್ಲಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಂದಿಗೆ ಹೋಲಿಕೆ ಮಾಡಿದರೆ ದ್ವಿಗುಣವಾಗಿದೆ. ಕಮಿಷನ್ ಹೆಚ್ಚಳ ಮಾಡಬೇಕೆಂದು ಕೇಂದ್ರ ಪೆಟ್ರೋಲಿಯಂ ಸಚಿವರು ಹಾಗೂ ರಾಜ್ಯದ ಮುಖ್ಯಮಂತ್ರಿಗೆ ಮನವಿ ಮಾಡಲಾಗಿತ್ತು. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಬೇಕೆಂಬ ಕಾರಣಕ್ಕಾಗಿಯೇ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಬಂಕ್‍ಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಪ್ರತಿ ವರ್ಷ ವೇತನ ಪರಿಷ್ಕರಣೆ ಮಾಡಬೇಕು. ಅಲ್ಲದೆ, ಕಂಪೆನಿಗಳ ಡೀಲರ್ಸ್‍ಗಳು ಬಂಕ್‍ಗಳಲ್ಲಿನ ಸಿಬ್ಬಂದಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂದು ಸೂಚನೆ ಕೊಡುತ್ತಾರೆ. ಶೌಚಾಲಯ, ತಿಂಡಿ, ಊಟದ ವ್ಯವಸ್ಥೆ, ಶುಚಿತ್ವ ಹೀಗೆ ಎಲ್ಲವನ್ನೂ ನಿರ್ವಹಿಸಬೇಕಾಗಿರುವುದರಿಂದ ಬಂಕ್ ನಡೆಸುವುದೇ ದುಸ್ತರವಾಗಿದೆ ಎಂಬುದು ಮಾಲೀಕರ ಅಳಲು.

ನಾವು ಕೇಂದ್ರ ಅಥವಾ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿಲ್ಲ. ಐದು ವರ್ಷವಾದರೂ ಬೇಡಿಕೆ ಈಡೇರಿಸದ ಕಾರಣ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಕಳೆದ ಹಲವು ತಿಂಗಳುಗಳಿಂದ ನಿರಂತರವಾಗಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯನ್ನು ಪ್ರತಿ ದಿನ ಲೀಟರ್ ಗೆ ಪೈಸೆಗಳಲ್ಲಿ ಏರಿಕೆ ಮಾಡಿದರು. ಆದರೆ, ಕಳೆದ ವಾರ ಇದ್ದಕ್ಕಿದ್ದಂತ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯಲ್ಲಿ ಸರಿ ಸುಮಾರು 10ರಿಂದ 8ರೂ.ವರೆಗೆ ಕಡಿತ ಮಾಡಿತು. ಇದರಿಂದ ಪ್ರತಿಯೊಂದು ಬಂಕ್‍ಗಳಿಗೆ ಕನಿಷ್ಠ 5ರಿಂದ 25 ಲಕ್ಷವರೆಗೂ ನಷ್ಟವಾಯಿತು. ಮೊದಲೇ ಸಂಕಷ್ಟದಲ್ಲಿರುವ ನಮಗೆ ಕೇಂದ್ರ ಸರ್ಕಾರ ಗಾಯದ ಮೇಲೆ ಬರೆ ಎಳೆದಿದೆ ಎಂದು ಅಳಲು ತೋಡಿಕೊಂಡರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಾವೋಸ್‍ನಿಂದ ಹಿಂದುರಿಗಿದ ತಕ್ಷಣವೇ ಭೇಟಿಯಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಮಾಡಲಿದ್ದೇವೆ.

ಅಲ್ಲದೆ, ಶೀಘ್ರದಲ್ಲೇ ಕೇಂದ್ರ ಪೆಟ್ರೋಲಿಯಂ ಸಚಿವರನ್ನು ಸಹ ಭೇಟಿ ಮಾಡಲಿದ್ದೇವೆ. ನಾವು ಸಾರ್ವಜನಿಕರಿಗೆ ತೊಂದರೆ ಕೊಟ್ಟು ಪ್ರತಿಭಟನೆ ನಡೆಸುವ ಉದ್ದೇಶ ಹೊಂದಿಲ್ಲ. ಬಂಕ್ ಮಾಲೀಕರ ಸಂಕಷ್ಟವನ್ನು ಜನರಿಗೆ ತಿಳಿಸುವ ಸದುದ್ದೇಶವಾಗಿದೆ. ನಮ್ಮ ಪ್ರತಿಭಟನೆಗೆ ಸಾರ್ವಜನಿಕರು ಕೂಡ ಕೈ ಜೋಡಿಸಬೇಕೆಂದು ಮುಖಂಡರು ಮನವಿ ಮಾಡಿದ್ದಾರೆ.

,

Leave a Reply

Your email address will not be published. Required fields are marked *