ಇತ್ತೀಚೆಗೆ ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದಲ್ಲಿ ಯಾವುದೇ ದೋಷಗಳಿರಲಿಲ್ಲ. ನಿಯಮಿತವಾಗಿ ವಿಮಾನದ ತಪಾಸಣೆಗಳನ್ನು ನಡೆಸಲಾಗುತ್ತಿತ್ತು ಎಂದು ಏರ್ ಇಂಡಿಯಾ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ತಮ್ಮ ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಮಾಹಿತಿ ಸಂಗ್ರಹಿಸಲು ಬ್ಲ್ಯಾಕ್ ಬಾಕ್ಸ್ ಅನ್ನು ಅಮೆರಿಕಕ್ಕೆ ಕಳುಹಿಸಬಹುದು ಎಂಬ ವರದಿಗಳಿದ್ದು, ಈ ನಡುವೆ ಕೇಂದ್ರ ವಾಯುಯಾನ ಸಚಿವಾಲಯ ನಿರ್ಧಾರ ತೆಗೆದುಕೊಳ್ಳಲಿದೆ. ವಿಮಾನ ಅಪಘಾತ ತನಿಖಾ ದಳ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
2023 ರ ಜೂನ್‌ನಲ್ಲಿ ಕೊನೆಯ ತಪಾಸಣೆ ನಡೆದಿದೆ, ಮುಂದಿನ ತಪಾಸಣೆ ಡಿಸೆಂಬರ್‌ನಲ್ಲಿ ನಡೆಯಬೇಕಿತ್ತು. ಮಾರ್ಚ್‌ನಲ್ಲಿ ಬಲಭಾಗದ ಎಂಜಿನ್ ದುರಸ್ತಿ ಆಗಿತ್ತು, ಏಪ್ರಿಲ್‌ನಲ್ಲಿ ಎಡಭಾಗದ ಎಂಜಿನ್ ತಪಾಸಣೆ ಮಾಡಲಾಗಿತ್ತು. ಲಂಡನ್‌ಗೆ ಹಾರಾಟ ನಡೆಸುವವರೆಗೂ ವಿಮಾನದಲ್ಲಿ ಯಾವುದೇ ದೋಷಗಳಿರಲಿಲ್ಲ ಎಂದು ಸಿಇಒ ವಿಲ್ಸನ್ ಮಾಹಿತಿ ನೀಡಿದ್ದಾರೆ.
ಬ್ಲ್ಯಾಕ್ ಬಾಕ್ಸ್‌ಗೆ ಗಂಭೀರ ಹಾನಿಯಾದ ಕಾರಣ ಮಾಹಿತಿ ಸಂಗ್ರಹಿಸಲು ವಾಷಿಂಗ್ಟನ್‌ನಲ್ಲಿರುವ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದು ವರದಿಗಳು ತಿಳಿಸಿವೆ.
ಏರ್ ಇಂಡಿಯಾ ಅಂತರರಾಷ್ಟ್ರೀಯ ವಿಮಾನ ಸೇವೆಗಳನ್ನು ಶೇ.15ರಷ್ಟು ಜುಲೈ ಮಧ್ಯಭಾಗದವರೆಗೆ ಕಡಿತಗೊಳಿಸಿದೆ. ಕಡ್ಡಾಯ ಸುರಕ್ಷತಾ ತಪಾಸಣೆಗಳು, ಅಂತರರಾಷ್ಟ್ರೀಯ ಬೆಳವಣಿಗೆಯಿಂದ ವಾಯುಮಾರ್ಗ ಮುಚ್ಚುವಿಕೆ, ತಾಂತ್ರಿಕ ಸಮಸ್ಯೆಗಳು ಮುಂತಾದವುಗಳನ್ನು ಪರಿಗಣಿಸಿ ಏರ್ ಇಂಡಿಯಾ ಈ ಕ್ರಮ ಕೈಗೊಂಡಿದೆ.