ಅಜಾನು ಬಾಹು ಆಗುಂಬೆ

ಫೇಸ್ಬುಕ್ ಲೇಖನ

ಮೊನ್ನೆ ನಾನು, ಕೊರೋಡಿ ಕೃಷ್ಞಪ್ಪ, ಹೊನ್ನಾನಿ, ನಂದಾ, ಆಗುಂಬೆ ಹತ್ತಿರದ ಮಲಂದೂರು ಕಡೆ ಹೊರಟೆವು. ಜೊತೆಗೆ ಅಗುಂಬೆಯ ಬ್ಯಾಂಕ್ ದಿನೇಶ್ ಅವರನ್ನೂ ಕರಕೊಂಡು ಹೊರಟೆವು. ಮಲಂದೂರಿನ ಬಗ್ಗೆ ಬರೆವ ಮುನ್ನ ಈ ದಿನೇಶ್ ಬಗ್ಗೆ ಬರೆಯೋಣವೆನಿಸುತಿದೆ.

ಈ ದಿನೇಶ್ ಮೂವ್ವತ್ತೆರಡು ವರುಷಗಳ ತನ್ನ ಬ್ಯಾಂಕಿನ ಒಳಸುಳಿಗಳನ್ನು ಮಜಬೂತಾಗಿ ನಿರ್ಬಿಡೆಯಿಂದ ಹೇಳುತ್ತಾ ಚಕಿತಗೊಳಿಸುತ್ತಿದ್ದ ವ್ಯಕ್ತಿ. ತನ್ನ ಅಗುಂಬೆ ಊರಲ್ಲಿ ವಾರದ ಸಂತೆ ನಡೆಸಬೇಕೆಂಬ ಉದ್ದೇಶದಿಂದ ತಾನೇ ವ್ಯಾಪಾರಸ್ಥರನ್ನು ಹುಡುಕಿ ತಂದು ಅವರಿಗೆ ಜಾಗ, ನೀರು, ಊಟದ ವ್ಯವಸ್ಥೆ ಮಾಡಿಕೊಟ್ಟಿದ್ದೆ ಅಲ್ಲದೆ ಸ್ವತಃ ತಾವೇ ಬರುವಾಗ ತರಕಾರಿಯನ್ನೂ ಅಂಗಡಿಯಿಂದ ತಂದು ಸಂತೆ ವ್ಯಾಪಾರಿಗಳಿಗೆ ಅರ್ಧ ಬೆಲೆಗೆ ಕೊಟ್ಟು ಮಾರಾಟ ಕ್ಕಿಳಿಸಿದ್ದೂ ಉಂಟಂತೆ.

ಎಪ್ಪತ್ತರ ದಶಕ ಮತ್ತು ಎಂಬತ್ತರ ದಶಕದಲ್ಲಿ ಸಕ್ಕರೆ ಮತ್ತು ಸೀಮೆಎಣ್ಣೆಗೆ ಭಯಂಕರ ತತ್ವಾರ. ಮುಕ್ತ ಮಾರುಕಟ್ಟೆಯಲ್ಲಿ ಸಿಗುವ ಸಕ್ಕರೆಗೂ ನ್ಯಾಯ ಬೆಲೆ ಅಂಗಡಿಯಲ್ಲಿ ಸಿಗುವ ಸಕ್ಕರೆಗೂ ಬೆಲೆಯಲ್ಲಿ ವಿಪರೀತ ವ್ಯತ್ಯಾಸ. ತಮ್ಮ ಅಗುಂಬೆಗೊಂದು ನ್ಯಾಯ ಬೆಲೆ ಅಂಗಡಿ ಸಿಗದೇ ಹೋದದ್ದರಿಂದ ಚಿಂತಿತರಾದ ರಾಮಚಂದ್ರ ದಿನೇಶ್ ಎಂಬ ಉದ್ದ ಹೆಸರಿನ ಬಾರಿ ಗಾತ್ರದ ಈ ವ್ಯಕ್ತಿ ತಾವೆ ಒಂದು ಉಪಾಯ ಮಾಡಿದರು. ಅದರ ಪ್ರಕಾರ, ಮಳಿಗೆ ಯೊಂದನ್ನು ಬಾಡಿಗೆಗೆ ಪಡೆದು ಅದಕ್ಕೆ ನ್ಯಾಯ ಬೆಲೆ ಅಂಗಡಿ ಎಂಬ ಬೊರ್ಡನ್ನು ನೇತು ಹಾಕಿದರು. ತೀರ್ಥಹಳ್ಳಿಯಿಂದ ತಮ್ಮ ಸ್ವಂತ ಹಣದಿಂದ ಮುಕ್ತ ಮಾರುಕಟ್ಟೆಯಲ್ಲಿ ಒಂದಕ್ಕೆರಡು ಹಣಕೊಟ್ಟು ಸಕ್ಕರೆ ಮತ್ತು ಸೀಮೆಎಣ್ಣೆಯನ್ನು ಹೊತ್ತು ತಂದು ಅಗುಂಬೆಯಲ್ಲಿ ಇಳಿಸಿ ಜನರಿಗೆ ನ್ಯಾಯ ಬೆಲೆಯಲ್ಲಿ ಹಂಚಿದರು. ಹೀಗೆ ಒಂದೆರಡು ವಾರ ನಡೆಸಿದ ಮೆಲೆ ತಾಲೂಕು ಅಡಳಿತ ಚುರುಕಾಗಿ ಅಗುಂಬೆಗೊಂದು ನ್ಯಾಯ ಬೆಲೆ ಅಂಗಡಿ ಯನ್ನೇ ಮಂಜೂರು ಮಾಡಬೇಕಾಯಿತಂತೆ.

ಹೀಗೆ ಹತ್ತು ಹಲವಾರು ಸಾಹಸಗಳಲ್ಲಿ ತೊಡಗಿರುವ ದಿನೇಶ್ ತಮ್ಮ ನಿಷ್ಟುರದ ಮಾತುಗಳ ಮೂಲಕ ಯಾರನ್ನಾದರೂ ಎದುರು ಹಾಕಿಕೊಳ್ಳುವು ದರಲ್ಲಿ ನೂರು ಕಿಲೊ ಮೀಟರ್ ಮುಂದಿರುವ ವ್ಯಕ್ತಿ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ಕೆಲಸಕ್ಕಿರುವುದೇ ಬಹುಭಾಗ್ಯದ ಬೆರಗಿನ ಕಣ್ಣೋಟ. ಆ ಕಾಲದ ಇಂದ್ರನ ಅರಮನೆಯ ವಾತಾವರಣದಂತೆ. ಆದರೆ, ದಿನೇಶ್ ಈ ಒಣ ಅಡಂಬರವನ್ನು ಅತ್ಯಂತ ಗಟ್ಟಿಯಾಗಿಯೇ ಒಡೆಯುತ್ತಾ ಒಣ ಜಂಬಗಳನ್ನು ಲೇವಡಿ ಮಾಡುತ್ತಾ ಹೋಗುತ್ತಿದ್ದರು. ರೇಮಂಡ್ ಷರ್ಟಿಂಗ್ ಮತ್ತು ಸೂಟಿಂಗ್ ಹಾಗೂ ರೇಷ್ಮೆ ಸೀರೆಗಳ ಜಗ್ಗುಡಿಯುವಿಕೆಯಲ್ಲಿ ಬ್ಯಾಂಕು ಮಿಂಚುತ್ತಿದ್ದಾಗ ದಿನೇಶ್ ಈ ಫಾಲ್ಸ್ ಪ್ರಿಸ್ಟೀಜನ್ನು ತನ್ನ ವಿಮಲ್ ಹೆಸರಿನ ಗುಟ್ಕಾ ತುಂಬುವ ದೊಡ್ಡ ಗಾತ್ರದ ಬ್ಯಾಗು ಮತ್ತು ಹಳೆಯ ಗುಬ್ಬಿಗಳಿಲ್ಲದ ಅಂಗಿ ಮತ್ತು ದೊಗಲೆ ಪ್ಯಾಂಟಿನ ಮೂಲಕವೇ ಸ್ಟೆಟ್ ಬ್ಯಾಂಕಿನ ಗಲ್ಲದ ಮೇಲೆ ಕೂತುಕೊಳ್ಳುತ್ತಿದ್ದರು. ಗ್ರಾಹಕರು ಮತ್ತು ಉಳಿದ ಸಿಬ್ಬಂದಿಗಳೂ ಸಲ್ಲಬಾರದ ವ್ಯಕ್ತಿಯೊಬ್ಬ ಬ್ಯಾಂಕನ್ನು ಪ್ರವೇಶಿಸುತ್ತಿದ್ದಾನೆಂದೇ ಭಾವಿಸಿಕೊಳ್ಳುವಂತೆ ಮಾಡುತ್ತಿದ್ದರು.

ತಮ್ಮ ಸಂಬಳ ಏರಿಸಿಕೊಳ್ಳಲು ಐಟಕ್ ನಂತಹ ಕಮ್ಯೂನಿಸ್ಟ್ ಸಂಘಟನೆಗಳು ಬ್ಯಾಂಕಿನ ನೌಕರರಿಗೆ ಬೇಕು. ಸಂಬಳ ಏರಿಸಿಕೊಳ್ಳಲು ಈ ಸಂಘಟನೆಯ ಪದಾಧಿಕಾರಿಗಳಾಗಿಯೂ ಕೆಲಸ ಮಾಡುತ್ತಾರೆನ್ನುವುದನ್ನು ನೇರವಾಗಿಯೇ ಹೇಳಿ ಸೈ ಎನಿಸಿಕೊಳ್ಳುತ್ತಿದ್ದರು.‘ಪಥ ಸಂಚಲನಕ್ಕೆ ಅರ್‌ಎಸ್‌ಎಸ್ ಓಟಿಗೆ ಬಿಜೆಪಿ. ಸಂಬಳ ಏರಿಕೆಗೆ ಕಮ್ಯೂನಿಸ್ಟ್ ’ಎಂಬುದು ಇವರ ಜನಪ್ರಿಯ ಅರ್ಥಪೂರ್ಣ ಮಾತಾಗಿತ್ತು. ಇವರ ಪರ್ಸ್ ಎಂಬುದು ತಾಲೂಕು ಕಛೇರಿಯ ರೆಕಾರ್ಡ್ ರೂಮಾಗಿರುತ್ತಿತ್ತು. ಅಗುಂಬೆಯಿಂದ ತೀರ್ಥಹಳ್ಳಿಯ ಬ್ಯಾಂಕಿಗೆ ಬರುವಾಗ ಬಸ್ಸಿನವರಿಗೆ ಸ್ವಲ್ಪ ಕಲೆಕ್ಷನ್ ಕಮ್ಮಿಯಾ ಗಿತ್ತಂತೆ. ಏಕೆಂದರೆ, ಆಗುಂಬೆಯ ಅನೇಕ ನಾಗರೀಕರ ಕೆಲಸ ಕಾರ್ಯಗಳಿಗೆ ದಿನೇಶ್ ವೇದಿಕೆಯಾಗಿದ್ದರು.

ಆಗುಂಬೆಯಲ್ಲಿ ಅರ್ಧ ರೇಟಿಗೆ ತರಕಾರಿ ಕೊಡುವುದು, ವಿದ್ಯಾರ್ಥಿಗಳಿಗೆ ಐದು ರೂಪಾಯಿಗೆ ಟಿನ್ನು ಮತ್ತು ಊಟದ ವ್ಯವಸ್ಥೆ ಮಾಡಿ ಜೇಬು ಖಾಲಿ ಮಾಡಿಕೊಳ್ಳುತ್ತಾ ಸಾಲಗಾರರಾಗುವುದೂ, ಅದನ್ನು ತೀರಿಸಲು ಮಂಡೆ ಬಿಸಿ ಮಾಡಿಕೊಳ್ಳುವಾಗಂತೂ ದಿನೇಶ್ ಅಪೂರ್ವ ಕ್ರಿಯೆಟಿವ್ ಅಗಿ ಅನಾವರ ಣಗೊಳ್ಳುತ್ತಾ ಹೋಗುತ್ತಾರೆ.

ತಮ್ಮದೇ ಬೇರೊಂದು ಲೋಕವೆಂಬಂತೆ ಬ್ಯಾಂಕಿನ ನೌಕರರೆಲ್ಲ ಒಂದಾಗಿ ಚಹಾ ಹೀರಲು ತಯಾರಾಗುವಾಗ ದಿನೇಶ್ ಬ್ಯಾಂಕಿನಿಂದ ತಟ್ ಅಂತಾ ಹೊರ ಬಂದು ಹೋಟೆಲಿನಲ್ಲಿ ಅರ್ಧ ಟೀ ಹೇಳಿ (ಇವರು ಟಿ ಕುಡಿಯೋಲ್ಲ) ಆಗುಂಬೆಯ ಮಲಂದೂರಿನಂತಹ ಹಳ್ಳಿಯಿಂದ ಬರುವ ರೈತನೋ, ಬಗಲು ಚೀಲದ ಬುದ್ಧಿಜೀವಿಯೊಂದಿಗೋ ಚರ್ಚೆಯಲ್ಲಿ ತೊಡಗುವಾಗ ಉಳಿದವರುಗಳಿಗೆ ಈತ ಕಬ್ಬಿಣದ ಕಡಲೆಯಾಗುತ್ತಾರೆ. ಬಂಗಾರಪ್ಪನವರ ಅಪ್ಪಟ ಅಭಿಮಾನಿ ಕೂಡಾ. ಬಂಗಾರಪ್ಪನವರ ಸಮಾವೇಶಗಳಿಗೆ ಮಾತ್ರ ಬ್ಯಾಂಕಿಗೆ ರಜಾ ತೆಗೆದುಕೊಳ್ಳುವುದು ಇವರ ಜಾಯಮಾನ.

ಗುಲ್ಬರ್ಗಾ, ರಾಯಚೂರು, ದಾವಣಗೆರೆ ಎಲ್ಲೇ ಬಂಗಾರಪ್ಪನವರ ಸಭೆ ಇದ್ದರೂ ದಿನೇಶ್ ಅಲ್ಲಿ ಹಾಜರ್. ಇಂತಹ ಸಮಾವೇಶಗಳಲ್ಲೂ ಬಂಗಾರಪ್ಪ ನವರು ಇವರನ್ನು ಹೆಸರು ಹಿಡಿದು ಕರೆಯುತ್ತಿದ್ದರಂತೆ. ಹುಬ್ಬಳ್ಳಿಯಲ್ಲಿ ಇವರದೊಂದು ಮನೆ ಇದೆ. ಅದರ ಹೆಸರು ಬಂಗಾರಪ್ಪ ಆಶ್ರಯ. ಈ ಮನೆ ಯನ್ನು ಮಾರಾಟಕ್ಕಿಟ್ಟಿರುವ ವಿಷಯವನ್ನು ಅತ್ಯಂತ ದುಖದಿಂದ ಹೇಳಿದರು. ಮನೆಯ ಹೆಸರನ್ನು ಮನೆ ಕೊಂಡ ವ್ಯಕ್ತಿ ಬದಲಾಯಿಸುತ್ತಾರೆಂಬುದೆ ಇವರ ದುಃಖಕ್ಕೆ ಕಾರಣವಾದ ಅಂಶ. ಮಲಂದೂರಿನ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ.

– ನೆಂಪೆ ದೇವರಾಜು, ಹಿರಿಯ ಪತ್ರಕರ್ತರು

Leave a Reply

Your email address will not be published. Required fields are marked *