ನವದೆಹಲಿ, ಆಗಸ್ಟ್ 27 ದೆಹಲಿ ಸರ್ಕಾರವು ಬಾಲಿವುಡ್ ನಟ ಸೋನು ಸೂದ್ ಅವರನ್ನು ” ದೇಶ್ ಕೆ ಮೆಂಟರ್ ” ಉಪಕ್ರಮದ ಸದ್ಭಾವನಾ ರಾಯಭಾರಿಯಾಗಿ ನೇಮಿಸಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಘೋಷಿಸಿದ್ದಾರೆ.
ಪತ್ರಿಕಾಗೋಷ್ಠಿ ಉದ್ದೇಶಿಸಿ ಶುಕ್ರವಾರ ಮಾತನಾಡಿದ ಕೇಜ್ರಿವಾಲ್. “ಪ್ರಪಂಚವು ವಿಕಸನಗೊಂಡಿದ್ದು, ಸಾಂಪ್ರದಾಯಿಕ ಅವಕಾಶಗಳನ್ನು ಹೊರತುಪಡಿಸಿ ಹೆಚ್ಚಿನ ಅವಕಾಶಗಳಿವೆ. ದೆಹಲಿ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳು, ಸಮಾಜದ ಅಂಚಿನಲ್ಲಿರುವ ವರ್ಗಗಳಿಂದ ಬಂದವರು, ತಮ್ಮ ವೃತ್ತಿಯನ್ನು ಆಯ್ಕೆ ಮಾಡಲು ಸರಿಯಾದ ಮಾರ್ಗದರ್ಶನವನ್ನು ಸೋನ್ ಸೂದ್ ನೀಡಲಿದ್ದಾರೆ. ದೆಹಲಿ ಸರ್ಕಾರದ ದೇಶ್ ಕೆ ಮೆಂಟರ್ ಉಪಕ್ರಮದ ಅಡಿಯಲ್ಲಿ , ಅವರು ವೃತ್ತಿ ಮಾರ್ಗದರ್ಶಿಯಾಗಲು ಮನವಿ ಮಾಡುತ್ತೇವೆ” ಎಂದಿದ್ದಾರೆ.
ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಸಾವಿರಾರು ವಲಸೆ ಕಾರ್ಮಿಕರ ಸಹಾಯಕ್ಕೆ ಸೋನು ಸೂದ್ ನೀಡಿದ ಕೊಡುಗೆಗಳನ್ನು ಕೇಜ್ರಿವಾಲ್ ಪ್ರಶಂಸಿಸಿ,ಸರ್ಕಾರದ ಈ ಕಾರ್ಯಕ್ರಮದ ರಾಯಭಾರತ್ವ ವಹಿಡಸಲು ಸೋನ್ ಸೂದ್ ಉತ್ತಮ ವ್ಯಕ್ತಿ ಎಂದು ಹೇಳಿದ್ದಾರೆ.
ಸಾಕಷ್ಟು ಸಂಪನ್ಮೂಲಗಳು ಮತ್ತು ಮಾರ್ಗದರ್ಶನದ ಕೊರತೆಯಿಂದಾಗಿ, ಅವರು ಬಯಸಿದ ವೃತ್ತಿಯನ್ನು ಮುಂದುವರಿಸಲು ಸರಿಯಾದ ಅವಕಾಶವನ್ನು ಪಡೆಯದ ಲಕ್ಷಾಂತರ ಮಕ್ಕಳೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುವ ದೆಹಲಿ ಸರ್ಕಾರದ ಉಪಕ್ರಮದೊಂದಿಗೆ ತಾನು ಭಾಗಿಯಾಗಿರುವುದು ಅದೃಷ್ಟ ಎಂದು ನಟ ಸೋನು ಸೂದ್ ಹೇಳಿದ್ದಾರೆ.
“ಲಾಕ್‌ಡೌನ್ ಮಧ್ಯೆ ವಲಸೆ ಕಾರ್ಮಿಕರಿಗೆ ನೆರವು ನೀಡುವಾಗ, ಶಿಕ್ಷಣದ ಕೊರತೆಯು ಅವರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಒಂದೆಂದು ನಾವು ಅರಿತುಕೊಂಡೆವು. ಮೊದಲ ಲಾಕ್‌ಡೌನ್‌ನಲ್ಲಿ ಅಂತಹ 2,200 ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾದೆವು. ಮತ್ತು 20 ಸಾವಿರಕ್ಕೂ ಹೆಚ್ಚು ಜನರಿಗೆ ಸಹಾಯ ಮಾಡಲು ಸಾಧ್ಯವಾಯಿತು ಎಂದಿದ್ದಾರೆ.
ಇದೇವೇಳೆ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ದೆಹಲಿಯಲ್ಲಿ ಶಿಕ್ಷಣದಲ್ಲಿ ಕ್ರಾಂತಿ ಮಾಡಿದ ದಾರ್ಶನಿಕರು ಎಂದು ಸೋನು ಸೂದ್ ಬಣ್ಣಿಸಿದ್ದಾರೆ.
ಆದಾಗ್ಯೂ, ದೆಹಲಿಯ ಎಎಪಿ ಸರ್ಕಾರದೊಂದಿಗಿನ ತನ್ನ ಒಡನಾಟವು ಯೋಜನೆಗೆ ಮಾತ್ರ ಸೀಮಿತವಾಗಿದೆ ಎಂದು ಸೂದ್ ಸ್ಪಷ್ಟಪಡಿಸಿದ್ದಾರೆ. “ಯಾವುದೇ ಪಕ್ಷಕ್ಕೆ ಸೇರಲು ನನಗೆ ಯಾವುದೇ ರಾಜಕೀಯ ಆಕಾಂಕ್ಷೆಗಳಿಲ್ಲ. ಒಳ್ಳೆಯ ಉಪಕ್ರಮವನ್ನು ಬೆಂಬಲಿಸಲು ನಾನು ಇಲ್ಲಿದ್ದೇನೆ” ಎಂದು ಅವರು ಹೇಳಿದ್ದಾರೆ.
