ರೈತ ವಿರೋಧಿ ಕಾನೂನು ರದ್ದುಗೊಳಿಸಿ ಅನ್ನದಾತರನ್ನು ಉಳಿಸಿರಿ; ಅರವಿಂದ ಕೇಜ್ರೀವಾಲ್
ನವದೆಹಲಿ/ ಚಂಡೀಗಢ, ಅ 12 ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳು ರೈತರ ಮೇಲೆ ನಿರುಂಕಶವಾದಿಯಾಗಿ ಹೇರಲಾಗಿದ್ದು, ಅದನ್ನು ಹಿಂಪಡೆದು ಶೇ.100ರಷ್ಟು ಎಂಎಸ್‌ಪಿ ಜಾರಿಗೊಳಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಸೋಮವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ದೆಹಲಿಯ ಜಂತರ್‌ಮಂತರ್‌ನಲ್ಲಿ ರೈತ ವಿರೋಧಿ ಕಾನೂನುಗಳನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷ ಹಮ್ಮಿಕೊಂಡಿದ್ದ ಧರಣಿ ಉದ್ದೇಶಿಸಿ ಕೇಜ್ರೀವಾಲ್ ಮಾತನಾಡಿದರು.
ಪಂಜಾಬ್‌ನ ರೈತರಿಂದ ಅವರ ಕೃಷಿಯನ್ನು ಕಿತ್ತುಕೊಳ್ಳುವ ಸರ್ಕಾರದ ಕುಠಿಲ ವಿನ್ಯಾಸದೊಂದಿಗೆ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದಿರುವ ಕೇಜ್ರೀವಾಲ್, ಬ್ರಿಟೀಷರ ಪ್ರಾಬಲ್ಯದಿಂದ ಸ್ವಾತಂತ್ರ್ಯ ಪಡೆದ ನಂತರ, ದೇಶದಲ್ಲಿ ಆಹಾರದ ತೀವ್ರ ಕೊರತೆಯನ್ನು ಎದುರಿಸುತ್ತಿದ್ದು, ಪಂಜಾಬ್‌ನ ರೈತರು ಹೆಚ್ಚಿನ ಧಾನ್ಯಗಳನ್ನು ಉತ್ಪಾದಿಸುವ ಮೂಲಕ ದೇಶವನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಶ್ರಮಿಸಿದ್ದಾರೆ. ಅಂತಹವರಿಗೆ ಈ ಕಾಯ್ದೆ ಅನ್ಯಾಯ ಉಂಟು ಮಾಡುತ್ತಿದೆ ಎಂದರು.
ರೈತರನ್ನು ಬೆಂಬಲಿಸಿ ಆಯೋಜಿಸಿದ್ದ ಈ ಬೃಹತ್ ಪ್ರತಿಭಟನೆಯ ಸಂದರ್ಭದಲ್ಲಿ, ಪಕ್ಷದ ಪಂಜಾಬ್ ಮತ್ತು ದೆಹಲಿ ರಾಜ್ಯ ನಾಯಕತ್ವ ಮತ್ತು ಸ್ವಯಂಸೇವಕರು ಸಂಸತ್ ಭವನದತ್ತ ಮೆರವಣಿಗೆ ನಡೆಸಿ, ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರು.