ಆಧಾರ್ ಬದುಕುಳಿಯಿತು!

– ಬೇ.ನ.ಶ್ರೀನಿವಾಸಮೂರ್ತಿ, ಲೇಖಕರು

ಭಾರತದ ಪ್ರಜೆಗಳಿಗೆ ವಿಶಿಷ್ಟ ಗುರುತು ಚೀಟಿ ನೀಡುವ ಆಧಾರ್ ಯೋಜನೆ ಹಲವಾರು ಅನಿಶ್ಚಿತತೆಗಳ ಬೇಗುದಿಯಲ್ಲಿ ಬೇಯುತ್ತಿದ್ದು, ಈಗ ಸರ್ವೋಚ್ಛ ನ್ಯಾಯಾಲಯ ಅದರ ಸಂವಿಧಾನ ಬದ್ಧತೆ ಎತ್ತಿ ಹಿಡಿದಿರುವುದರಿಂದ ಯೋಜನೆಗೆ ಜೀವದಾನ ದೊರಕಿದಂತಾಗಿದೆ. ಇದರಿಂದ ಕೇಂದ್ರ ಸರಕಾರ ನಿರಾಳವಾಗಿ ಉಸಿರಾಡುವಂತಾಗಿದೆ.

ಸುಪ್ರೀಂಕೋರ್ಟಿನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಆಧಾರ್ ಯೋಜನೆಯನ್ನು 4:1 ಬಹುಮತದಲ್ಲಿ ಎತ್ತಿ ಹಿಡಿಯುವುದರೊಂದಿಗೆ ಎಲ್ಲ ಅನಿಶ್ಚಿತತೆಗೆ, ಸಂಶಯ ಗಳಿಗೆ, ಅದರಲ್ಲೂ ಮುಖ್ಯವಾಗಿ ನಾಗರಿಕರ ಖಾಸಗಿತನದ ಹಕ್ಕಿಗೆ ಚ್ಯುತಿ ಬರುವುದೆಂಬ ಭಯಕ್ಕೆ ಅಂತಿಮ ತೆರೆ ಎಳೆಯಲಾಗಿದೆ. ದಶಕದ ಹಿಂದೆಯೇ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ಜಾರಿಗೆ ಬಂದಿದ್ದ ಆಧಾರ್ ಯೋಜನೆ ಹತ್ತು ಹಲವು ರಾಜಕೀಯ ಮತ್ತು ಕಾನೂನಿನ ಆತಂಕ, ಅಡ್ಡಿಗಳನ್ನು ಎದುರಿಸಿದ್ದು ಸುಳ್ಳಲ್ಲ.

ಅಂದು ಪ್ರಮುಖ ವಿರೋಧ ಪಕ್ಷವಾಗಿದ್ದ ಭಾರತೀಯ ಜನತಾ ಪಕ್ಷ ಆಧಾರ್ ಯೋಜನೆಯನ್ನು ಕಟುವಾಗಿ ವಿರೋಧಿಸಿತ್ತು. ಅಂದಿನ ಸರಕಾರಕ್ಕೆ ಅನೇಕ ರೀತಿಯ ಕಿರಿಕಿರಿ ಯನ್ನುಂಟು ಮಾಡಿತ್ತು. ಆದರೆ, ವಿಪರ್ಯಾಸದ ಸಂಗತಿ ಎಂದರೆ, 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಜಯಭೇರಿ ಹೊಡೆದ ಬಿಜೆಪಿ ನರೇಂದ್ರ ಮೋದಿ ನೇತೃತ್ವದ ಸರಕಾರ ಆಧಾರ್ ಯೋಜನೆ ರದ್ದುಪಡಿಸುವ ಅಥವಾ ಅದನ್ನು ದುರ್ಬಲಗೊಳಿಸುವ ಯತ್ನಕ್ಕೆ ಕೈ ಹಾಕದೆ ಯುಪಿಎ ಸರಕಾರಕ್ಕಿಂತ ಅಧಿಕ ಉತ್ಸುಕತೆಯಿಂದ ಯೋಜನೆ ಮುಂದುವ ರಿಸಿದ್ದೇ ಅಲ್ಲದೆ, ಅದನ್ನು ಇನ್ನಷ್ಟು ದೃಢಗೊಳಿಸಿ ಅದರ ವ್ಯಾಪ್ತಿ ವಿಸ್ತರಿಸಿತು!

ಹಾಗೆ ನೋಡಿದರೆ, ಆಧಾರ್ ಯೋಜನೆಯನ್ನು ಸಂವಿಧಾನ ಪೀಠ ಇಡಿಯಾಗಿ ಮಾನ್ಯ ಮಾಡಿಲ್ಲ. ಅನೇಕ ವ್ಯಾವಹಾರಿಕ, ತಾಂತ್ರಿಕ ಮತ್ತು ಅನಿವಾರ್ಯ ಕಾರಣಗಳಿಂದಾಗಿ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠದ ನಾಲ್ವರು ನ್ಯಾಯಮೂರ್ತಿಗಳು ಆಧಾರ್‌ನ ಸಂವಿಧಾನಬದ್ಧತೆ ಎತ್ತಿ ಹಿಡಿದಿದ್ದಾರೆ. ಆದರೆ, ಓರ್ವ ನ್ಯಾಯಾಧೀಶರು ಮಾತ್ರ ಭಿನ್ನಮತದ ತೀರ್ಪು ನೀಡಿ ಆಧಾರ್ ಅಸಾಂವಿಧಾನಿಕ ಎಂದು ಹೇಳಿದ್ದಾರೆ. ಬಹುಮತದ ತೀರ್ಪಿನಲ್ಲಿ ಕೂಡಾ ಆಧಾರ್ ಯೋಜನೆಯನ್ನು ಸಂಪೂರ್ಣವಾಗಿ ಒಪ್ಪಿಕೊಂಡಿಲ್ಲ. ಕೇವಲ ಕೆಲವೇ ಅವಶ್ಯಕತೆಗಳಿಗಷ್ಟೇ ಆಧಾರ್ ಕಾರ್ಡನ್ನು ಕಡ್ಡಾಯ ಮಾಡಿ ಇತರ ಹಲವು ಸೇವೆಗಳಿಗೆ, ಅಗತ್ಯಗಳಿಗೆ ಅದು ಕಡ್ಡಾಯ ಅಲ್ಲ ಎಂಬುದನ್ನು ಸ್ಪಷ್ಟವಾಗಿ ಸಾರಿ ದಂತಾಗಿದೆ.

ವೈಯಕ್ತಿಕ ಮಾಹಿತಿಯನ್ನು ಖಾಸಗಿ ಕಂಪನಿಗಳು ದುರುಪಯೋಗಪಡಿಸಿಕೊಳ್ಳುವುದನ್ನು ತಪ್ಪಿಸಲು ಆಧಾರ್ (ಆರ್ಥಿಕ ಮತ್ತು ಇತರ ಸಹಾಯಧನ, ಪ್ರಯೋಜನ ಮತ್ತು ಸೇವೆಗಳ ಉದ್ದೇಶಿತ ವಿತರಣೆ) ಕಾಯ್ದೆ, 2016 ಕಲಂ 57 ನ್ನು ನ್ಯಾಯಾಲಯ ರದ್ದುಪಡಿಸಿದೆ. ಈ ಕಲಮಿನ ಪ್ರಕಾರ, ಯಾವುದೇ ಉದ್ದೇಶದಿಂದ ಸರಕಾರವಾಗಲಿ ಅಥವಾ ಕಾರ್ಪೊರೇಟ್ ಸಂಸ್ಥೆಯಾಗಲಿ ಅಥವಾ ವ್ಯಕ್ತಿಯಾಗಲಿ ವ್ಯಕ್ತಿಯೊಬ್ಬರ ಗುರುತನ್ನು ದೃಢಪಡಿಸಿಕೊಳ್ಳಲು ಆಧಾರ್ ಅನ್ನು ಕೇಳುವುದಕ್ಕೆ ಯಾವುದೇ ತಡೆ ಇಲ್ಲ. ಇದರ ಅನ್ವಯ ವೇ ದೂರ ಸಂಪರ್ಕ ಸಂಸ್ಥೆಗಳು ಮತ್ತು ಇ-ಕಾಮರ್ಸ್ ಕಂಪನಿಗಳು ಗ್ರಾಹಕರ ಗುರುತು ದೃಢೀಕರಣಕ್ಕಾಗಿ ಆಧಾರ್ ಅನ್ನು ಕೇಳಬಹುದಿತ್ತು. ಆದರೆ, ಈಗ ಈ ಕಲಂ ರದ್ದಾಗಿ ರುವುದರಿಂದ ಇ-ಕಾಮರ್ಸ್ ಜಾಲತಾಣಗಳಲ್ಲಿ ಖರೀದಿ ವೇಳೆ ಮತ್ತು ಮೊಬೈಲ್ ಸಿಮ್ ಖರೀದಿ ವೇಳೆ ಗ್ರಾಹಕರು ಆಧಾರ್ ನೀಡಬೇಕಿಲ್ಲ, ಕಂಪೆನಿಗಳು ಕೂಡಾ ಗ್ರಾಹಕರನ್ನು ಒತ್ತಾಯಪಡಿಸುವಂತಿಲ್ಲ.

ಸರಕಾರದ – ರಾಜ್ಯ ಸರಕಾರವಾಗಲಿ, ಕೇಂದ್ರ ಸರಕಾರವಾಗಲಿ, ಸಮಾಜ ಕಲ್ಯಾಣ ಯೋಜನೆಗಳು ಮತ್ತು ಕಾರ್ಯಕ್ರಮಗಳು ಹಾಗೂ ಸಹಾಯ ಧನಗಳನ್ನು ಪಡೆದುಕೊ ಳ್ಳಲು ಆಧಾರ್ ಕಡ್ಡಾಯವಾಗಿರುವುದರ ಜೊತೆಗೆ ಪ್ಯಾನ್ ಕಾರ್ಡ್ ಪಡೆಯಲು ಮತ್ತು ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಕೂಡ ಆಧಾರ್ ಬೇಕೇ ಬೇಕು. ಅವುಗಳನ್ನು ಹೊರತುಪಡಿಸಿ ಮತ್ತಿತರ ಅಗತ್ಯಗಳಿಗೆ, ಸೇವೆಗಳಿಗೆ ಇನ್ನು ಮುಂದೆ ಆಧಾರ್ ಕಡ್ಡಾಯವಲ್ಲ. ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಜೋಡಿಸಬೇಕೆಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಶಾಲಾ ಕಾಲೇಜು ಪ್ರವೇಶಕ್ಕೆ, ಸಿಬಿಎಸ್‌ಇ, ಯುಜಿಸಿ ಮುಂತಾದ ಸಂಸ್ಥೆಗಳು ನಡೆಸುವ ವಿವಿಧ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ತಮ್ಮ ಆಧಾರ್ ಸಂಖ್ಯೆ ಯನ್ನು ನಮೂದಿಸಬೇಕಾಗಿಲ್ಲ. ಆಧಾರ್ ಇಲ್ಲ ಎಂಬ ಕಾರಣಕ್ಕೆ ಯಾವ ಮಗುವಿಗೂ ಯಾವುದೇ ಕಲ್ಯಾಣ ಕಾರ್ಯಕ್ರಮಗಳ ಪ್ರಯೋಜನವನ್ನು ನಿರಾಕರಿಸುವಂತಿಲ್ಲ.

ಕಳೆದ ವರ್ಷ ಸುಪ್ರೀಂ ಕೋರ್ಟಿನ ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠ ನಾಗರಿಕರ ಖಾಸಗಿತನದ ಹಕ್ಕು ಮೂಲಭೂತ ಹಕ್ಕು ಎಂದು ತೀರ್ಪು ನೀಡಿದ ಮೇಲೆ ಆಧಾರ್ ತೊಂದರೆಗೀಡಾದದ್ದು, ಅದರಡಿಯಲ್ಲಿ ನೀಡಲಾಗುವ ವೈಯಕ್ತಿಕ ಜೈವಿಕ ಮಾಹಿತಿ, ಹೆಬ್ಬೆಟ್ಟಿನ ಗುರುತು, ಕಣ್ಣು ಪಾಪೆ ದಾಖಲೆ ಇವು ವ್ಯಕ್ತಿಯ ಖಾಸಗಿತನದ ಹಕ್ಕಿನ ಮೇಲೆ ಆಕ್ರಮಣ ಮಾಡುವಂಥದ್ದು ಎಂದು ಅನೇಕ ಸಂಸ್ಥೆಗಳು, ಪ್ರತಿನಿಧಿಗಳು ಮತ್ತು ಸಾರ್ವಜನಿಕ ವ್ಯಕ್ತಿಗಳು ನ್ಯಾಯಾಲಯದ ಕಟ್ಟೆ ಹತ್ತಿದ್ದರು. ಇದರಿಂದ ಸರಕಾರ ಯಾವುದೇ ವ್ಯಕ್ತಿಯ ಮೇಲೆ ಕಣ್ಗಾವಲು ಇಡುವ ಸಾಧ್ಯತೆ ಇರುವುದರಿಂದ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗುವುದೆಂದು ಅವರ ದೂರು ಆಗಿತ್ತು. ಆದರೆ, ಸುಪ್ರೀಂ ಕೋರ್ಟ್ ಇದನ್ನು ಒಪ್ಪಿಕೊಂಡಿಲ್ಲ.

ತೀರಾ ವ್ಯಾವಹಾರಿಕ ನೆಲೆಯಲ್ಲಿ ನೋಡುವುದಾದರೆ, ಖಾಸಗಿತನದ ಹಕ್ಕಿನ ಉಲ್ಲಂಘನೆ ಕಾರಣದ ಮೇಲಾಗಲಿ, ಆಧಾರ್ ಕಾಯ್ದೆಯನ್ನು ಹಣಕಾಸು ಸಂಸ್ಥೆ ಎಂದು ಪರಿಗಣಿಸಿ ರಾಜ್ಯಸಭೆಯ ಅನುಮತಿ ಇಲ್ಲದೆಯೇ ಸಂಸತ್ತು ಅಂಗೀಕರಿಸಿದೆ ಎಂಬ ತಾಂತ್ರಿಕ ಕಾರಣದ ಮೇಲಾಗಲಿ ಆಧಾರ್ ಯೋಜನೆಯನ್ನು ರದ್ದುಪಡಿಸುವ ದುಸ್ಸಾಹಸಕ್ಕೆ ಸರ್ವೋಚ್ಛ ನ್ಯಾಯಾಲಯ ಕೈ ಹಾಕಲಿಲ್ಲ.

ಆಧಾರ್ ಯೋಜನೆ ರದ್ದಾಗುವ ಸಾಧ್ಯತೆ ತೀರಾ ಕಡಿಮೆ ಇತ್ತು ಅಥವಾ ಇದ್ದೇ ಇರಲಿಲ್ಲ ಎಂದರೂ ನಡೆದೀತು. ಸುಮಾರು ಒಂದು ದಶಕದ ಹಿಂದೆ ಜಾರಿಗೆ ಬಂದ ಈ ಯೋಜನೆ ಯಡಿಯಲ್ಲಿ ದೇಶದ 120 ಕೋಟಿ ಜನ ಆಧಾರ್ ಕಾರ್ಡ್ ಪಡೆದುಕೊಂಡಿದ್ದಾರೆ ಅಥವಾ ಪಡೆದುಕೊಳ್ಳಲು ನೋಂದಾಯಿಸಿದ್ದಾರೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಆಧಾರ್ ಯೋಜನೆ ಜಾರಿಗಾಗಿಯೇ ಕೇಂದ್ರ ಸರಕಾರ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವನ್ನು ಸ್ಥಾಪಿಸಿ ಹತ್ತಾರು ಸಹಸ್ರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾ ಗಿದೆ. ಕೇಂದ್ರ ಸರಕಾರವೇ ಹೇಳಿರುವಂತೆ ಆಧಾರ್ ಯೋಜನೆ ಜಾರಿಯಾದಾಗಿನಿಂದ ವಿವಿಧ ಯೋಜನೆಗಳ ಸಬ್ಸಿಡಿ ನೀಡಿಕೆಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಫಲಾನು ಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಿರುವುದರಿಂದ ಸುಮಾರು 90 ಸಾವಿರ ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ಉಳಿಸಲಾಗಿದೆ. ಈ ಹಂತದಲ್ಲಿ ಯಾವುದೇ ನ್ಯಾಯಾಲಯವಾಗಲಿ ಯಾವುದೇ ಕಾರಣದ ಮೇಲೆ ಯೋಜನೆಯನ್ನು ರದ್ದುಗೊಳಿಸುವಂಥ ಅಸಾಮಾನ್ಯ ಕಾರ್ಯಕ್ಕೆ ಕೈಹಾಕಲಿಕ್ಕಿಲ್ಲ. ಈಗಲೂ ಇದೇ ಆಗಿರುವುದು.

ಸುಪ್ರೀಂ ಕೋರ್ಟ್, ಖಾಸಗಿತನದ ಹಕ್ಕಿನ ಉಲ್ಲಂಘನೆಗೆ ಸಂಬಂಧಿಸಿದಂತೆ ಒಂಬತ್ತು ಸದಸ್ಯರ ಸಂವಿಧಾನ ಪೀಠ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಆಧಾರ್ ಯೋಜನೆಯ ಮೂರು ಅಂಶಗಳ ಬಗ್ಗೆ ಮನವರಿಕೆ ಮಾಡಿಕೊಂಡಂತಿದೆ. ಅವುಗಳೆಂದರೆ, ಆಧಾರ್ ಯೋಜನೆ ಜಾರಿಗೆ ಒಂದು ಕಾಯ್ದೆ; ಯೋಜನೆಯಲ್ಲಿ ನ್ಯಾಯಸಮ್ಮತವಾದ ಸರ್ಕಾರದ ಆಸಕ್ತಿ ಮತ್ತು ಹಿತಾಸಕ್ತಿ ಹಾಗೂ ಕಾಯ್ದೆಯ ಉದ್ದೇಶದ ಅನುಷ್ಠಾನದಲ್ಲಿ ಯುಕ್ತ ಪ್ರಮಾಣದಲ್ಲಿ ಖಾಸಗಿತನದ ಹಕ್ಕಿನ ಉಲ್ಲಂಘನೆ ಆಗದಂತೆ ಎಚ್ಚರಿಕೆ ವಹಿಸುವುದು.
ಕರ್ನಾಟಕ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ಕೆ.ಎಸ್.ಪುಟ್ಟಸ್ವಾಮಿ ಹಾಗೂ ಇತರ 30ಕ್ಕೂ ಹೆಚ್ಚು ಮಂದಿ ಆಧಾರ್ ಯೋಜನೆಯ ಸಿಂಧುತ್ವವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಈ ಹಿಂದೆ ಯುಪಿಎ ಸರಕಾರ ಆಧಾರ್ ಯೋಜನೆಗಾಗಿ ಒಂದು ಕಾಯ್ದೆಯನ್ನು ಮಾಡದೆಯೇ ಹಾಗೆಯೇ ಅನುಷ್ಠಾನಗೊಳಿಸಿತ್ತು. ಈ ಕೊರತೆಯನ್ನು ಮನಗಂಡ ಮೋದಿ ಸರಕಾರ 2016 ರಲ್ಲಿ ಕಾಯ್ದೆಯನ್ನು ಅಂಗೀಕರಿಸಿತ್ತು.

ಈಗ ಆಧಾರ್ ಸ್ಪಷ್ಟವಾಗಿ ಹೊರಹೊಮ್ಮಿದೆ. ಅದನ್ನು ಇನ್ನಷ್ಟು ಬಲಪಡಿಸುವ, ವಿಸ್ತೃತಗೊಳಿಸುವ ಸಾಧ್ಯತೆ ಇದ್ದೇ ಇದೆ. ಮತದಾರರ ಪಟ್ಟಿಯೊಂದಿಗೆ ಆಧಾರ್ ಸಂಖ್ಯೆ ಕಡ್ಡಾಯ ಜೋಡಣೆ ಮಾಡುವುದು ಅಂಥ ಒಂದು ಮಹತ್ವದ ಸಾಧ್ಯತೆ. ಆಧಾರ್ ಬಗ್ಗೆ ಏನೇ ಹೇಳಿದರೂ ಅದೊಂದು ವಿಶಿಷ್ಟ ಗುರುತು ಮಾತ್ರ. ಭಾರತ ರಾಷ್ಟ್ರದ ಪೌರತ್ವದ ದಾಖಲೆ ಆಗಲಾರದು. ಆ ದಿಸೆಯತ್ತ ಆಧಾರ್ ಸಾಗಲು ಸಾಧ್ಯವೇನು?

,

Leave a Reply

Your email address will not be published. Required fields are marked *