ರಸಗೊಬ್ಬರ ಬೆಲೆ ಏರಿಸಿರುವ ಕೇಂದ್ರದ ಕ್ರಮ ವಿರೋಧಿಸಿ ಖರ್ಗೆ ಪತ್ರ

ರಸಗೊಬ್ಬರ ಬೆಲೆ ಏರಿಸಿರುವ ಕೇಂದ್ರದ ಕ್ರಮ ವಿರೋಧಿಸಿ ಖರ್ಗೆ ಪತ್ರ

ಕಲಬುರಗಿ, ಮೇ 18  ರಸಗೊಬ್ಬರ ಬೆಲೆ ಏರಿಸಿರುವ ಕೇಂದ್ರದ ಕ್ರಮವನ್ನು ವಿರೋಧಿಸಿ ಶಾಸಕ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಕೃಷಿ ಸಚಿವ ಬಿಸಿ ಪಾಟೀಲ್ ಅವರಿಗೆ ಪತ್ರ ಬರೆದು, ಕೂಡಲೇ ರಸಗೊಬ್ಬರ ಬೆಲೆ ಇಳಿಸುವಂತೆ ಆಗ್ರಹಿಸಿದ್ದಾರೆ.
ಕಳೆದ ವರ್ಷ ನೆರೆ ಪ್ರವಾಹದಿಂದ ರಾಜ್ಯದ ರೈತರು ತೀವ್ರ ನಷ್ಟ ಅನುಭವಿಸಿದ್ದರು. ಅಲ್ಲದೇ, ಕೊರೊನಾ ಲಾಕ್ ಡೌನ್ ನಿಂದಾಗಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ರೈತರಿಗೆ ಸೂಕ್ತ ಮಾರುಕಟ್ಟೆಯೂ ಲಭಿಸಿರಲಿಲ್ಲ ಜೊತೆಗೆ ಬೆಲೆಯಲ್ಲಿ ತೀವ್ರ ಕುಸಿತ ಕಂಡಿದ್ದರಿಂದ ರೈತರು ತೀವ್ರ ಸಂಕಷ್ಟ ಅನುಭವಿಸಿದ್ದರು.
ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರಸಗೊಬ್ಬರ ಬೆಲೆ ಏರಿಕೆ ಮಾಡಿರುವುದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಂಪನಿಗಳು ರಸಗೊಬ್ಬರ ದರ ಏರಿಕೆ ಮಾಡಿದ್ದರೂ ಕೂಡಾ ಹಳೆ ದರದಲ್ಲಿಯೇ ರಸಗೊಬ್ಬರ ಪೂರೈಸುವುದಾಗಿ ಭರವಸೆ ನೀಡಿದ್ದ ಕೇಂದ್ರ ಸರ್ಕಾರ ತನ್ನ ಮಾತು ತಪ್ಪಿದೆ ಎಂದು ಖರ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.
ರಸಗೊಬ್ಬರ ಬೆಲೆಯಲ್ಲಿ ಸ್ಥಿರತೆ ಸಾಧಸಲು ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಅವರು ಹೇಳಿದ್ದರು. ಅವರ ಹೇಳಿಕೆಗೆ ವ್ಯತಿರಿಕ್ತವಾಗಿ ಎಲ್ಲಾ ರಸಗೊಬ್ಬರ ಗಳ ಬೆಲೆ ಶೇ 42 ರಿಂದ ಶೇ 58 ಗೆ ಏರಿಕೆಯಾಗಿದೆ. ನೆರೆ- ಬರ ಹಾಗೂ ರೋಗಗಳಿಂದ ಈಗಾಗಲೇ ಕೃಷಿ ಎಂಬುದು ನೀರ ಮೇಲಿನ ಗುಳ್ಳೆಯಾದಂತಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರಸಗೊಬ್ಬರ ಬೆಲೆ‌ಏರಿಸಿದರಿಂದ ರೈತರು ಕೃಷಿಯಿಂದ ವಿಮುಖರಾಗುವ ಸಾಧ್ಯತೆಯಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಕೊರೊನಾ ಸಾಂಕ್ರಾಮಿಕದ ಈ‌ ವಿಷಮ ಪರಿಸ್ಥಿತಿ ಯಲ್ಲಿ ರೈತರು ತುಂಬಾ ಕಷ್ಟದಲ್ಲಿದ್ದಾರೆ. ಈ ಸಮಯದಲ್ಲಿ ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸಿ ಈ ಕೂಡಲೇ ರಸಗೊಬ್ಬರ ಬೆಲೆ ಇಳಿಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಪತ್ರದ ಮೂಲಕ ಒತ್ತಾಯಿಸಿದ್ದಾರೆ.

, , ,

Leave a Reply

Your email address will not be published. Required fields are marked *