ರಾಜ್ಯದ ಎಲ್ಲ ಪಡಿತರ ಚೀಟಿದಾರರು ಒಂದು ತಿಂಗಳ ಒಳಗೆ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು, ಮಾಡದಿದ್ದರೆ ಪಡಿತರ ಕಾರ್ಡ್‌ಗಳನ್ನು ರದ್ದುಗೊಳಿಸಲಾಗುವುದು ಎಂದು ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದ್ದಾರೆ.
ಮೈಸೂರು ವಿಭಾಗದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವ ಮುನಿಯಪ್ಪ, ಇ-ಕೆವೈಸಿ ಪ್ರಕ್ರಿಯೆ ತ್ವರಿತ ಜಾರಿಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು. ಪಡಿತರ ಚೀಟಿದಾರರಿಗೆ ಇ-ಕೆವೈಸಿ ಪೂರ್ಣಗೊಳಿಸಲು ಒಂದು ತಿಂಗಳ ಅವಕಾಶ ನೀಡಲಾಗುವುದು. ಜನರಿಗೆ ಈ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾ ಮಟ್ಟದಲ್ಲಿ ಸಮಿತಿಗಳನ್ನು ರಚಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅನರ್ಹರಿಗೆ ಪಡಿತರ ಕಾರ್ಡ್‌ಗಳು ವಿತರಣೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅನಗತ್ಯ ಕಾರ್ಡ್‌ಗಳು ವಿತರಣೆಯಾದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಕಾನೂನು ಮಾಪನ ಶಾಸ್ತ್ರ ಇಲಾಖೆಗೆ ಅಗತ್ಯವಿರುವ ವಾಹನ ಸೌಲಭ್ಯ ಮತ್ತು ಕಾನೂನು ಮಾಪನ ನಿರೀಕ್ಷಕರ ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಆಹಾರ ಧಾನ್ಯಗಳ ಸಂರಕ್ಷಣೆ ಕುರಿತು ಮಾತನಾಡಿದ ಕೆ.ಹೆಚ್. ಮುನಿಯಪ್ಪ, ಗೋದಾಮುಗಳಲ್ಲಿ ಆಹಾರ ಧಾನ್ಯಗಳು ಕೆಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ ಧಾನ್ಯಗಳನ್ನು ಸಂಗ್ರಹಿಸಿ ಸಂರಕ್ಷಣೆ ಮಾಡಬೇಕು. ಯಾವುದೇ ಲೋಪವಾದರೂ, ಸಂಬಂಧಪಟ್ಟ ಅಧಿಕಾರಿಗಳೇ ಜವಾಬ್ದಾರರು ಎಂದು ಸ್ಪಷ್ಟಪಡಿಸಿದ್ದಾರೆ.
ಸಭೆಯಲ್ಲಿ ಆಹಾರ ಇಲಾಖೆಯ ಕಾರ್ಯದರ್ಶಿ ಮನೋಜ್ ಜೈನ್ ಮಾತನಾಡಿ, ಖಾಲಿ ಇರುವ ಆಹಾರ ನಿರೀಕ್ಷಕರ ಹುದ್ದೆಗಳಿಗೆ ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕರಿಗೆ ಹೆಚ್ಚುವರಿ ಪ್ರಭಾರ ನೀಡುವಂತೆ ಸೂಚಿಸಿದರು. ಇಲಾಖೆಯ ಖಾಲಿ ಹುದ್ದೆಗಳ ಜವಾಬ್ದಾರಿಯನ್ನು ಇತರ ಅಧಿಕಾರಿಗಳಿಗೆ ಹೆಚ್ಚುವರಿಯಾಗಿ ವಹಿಸಲಾಗುವುದು. ಇದರಿಂದ ಸೇವೆಯಲ್ಲಿ ವಿಳಂಬವಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.